ಬೆಳಗಾವಿ: ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗು ಎಂದು ಹೇಳಿದ್ದ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ. ಸಿದ್ದರಾಮಯ್ಯ 'ಗೊಬೆಲಪ್ಪ' ಎಂದಿರುವ ಕುಮಾರಸ್ವಾಮಿ ಹಿಟ್ಲರ್ ಆಸ್ಥಾನದಲ್ಲಿ ಸುಳ್ಳು ಹೇಳೋದನ್ನೇ ಕಾಯಕ ಮಾಡಿಕೊಂಡಿದ್ದ ಗೊಬೆಲ್‌ಗೆ ಹೋಲಿಕೆ ಮಾಡಿದ್ದಾರೆ.
ಕುಮಾರಸ್ವಾಮಿ ಟ್ವಿಟ್‌ನಲ್ಲಿ ಏನಿದೆ?
ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇಲ್ಲ. ʼಸಿದ್ದಕಲೆʼಯ ನಿಷ್ಣಾತರಿಗೆ ಸುಳ್ಳೇ ದೇವರು, ಸುಳ್ಳೇ ಸರ್ವಸ್ವ. ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಸುಳ್ಳು ಹೇಳಿಕೊಂಡು ಓಡಾಡುವ ʼಗೊಬೆಲಪ್ಪʼನ ʼಬೂಸಿಭಜನೆʼ ಹೊಸದೇನೂ ಅಲ್ಲ. ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವ ʼಕೃತಘ್ನʼತೆಗೆ ಇದೇ ಸಾಕ್ಷಿ. ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ʼಬ್ರೂಟಸ್ ಮನಃಸ್ಥಿತಿʼ, ಸಂದರ್ಭಕ್ಕೆ ತಕ್ಕಂತೆ ʼಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿʼ. ಆಪರೇಷನ್ ಕಮಲದಲ್ಲಿ ಕುಮ್ಮಕ್ಕಾಗಿ ಮೈತ್ರಿ ಸರಕಾರ ಕೆಡವಿದ ಸಿದ್ದಶೂರನ ಸಾರಥ್ಯದಲ್ಲಿ ʼಆಪರೇಷನ್ ಹಸ್ತʼ ನಡೆಯುತ್ತಿದೆ. ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಕುಮಾರಸ್ವಾಮಿ "ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ನಮ್ಮ ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ʼಬ್ರೋಕರಪ್ಪʼನ ಕುತಂತ್ರಕ್ಕೆ ಹೆದರುವ ಪ್ರಶ್ನೆ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್, ಈಗ ʼಅಭಿನವ ಅರಸುʼ ಎಂದು ಪುಂಗಿ ಬಿಡುವ ʼಸುಳ್ಳುಸಿದ್ದಪ್ಪʼನಿಗೆ ಶರಣಾಗಿದೆ. ಈ ವ್ಯಕ್ತಿಗೆ ಅರಸು ಹೆಸರೇಳುವ ಅರ್ಹತೆಯೇ ಇಲ್ಲ ಎಂದಿದ್ದಾರೆ.
PublicNext
22/12/2021 03:54 pm