ಪಣಜಿ: 69 ವರ್ಷ ವಯಸ್ಸಿನ ಗೋವಾದ ಮಾಜಿ ಸಚಿವೆ ಮತ್ತು ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಅಲಿನಾ ಸಲ್ದಾನಾ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮನೋಹರ್ ಪರಿಕ್ಕರ್ ಸಂಪುಟದಲ್ಲಿ ಸಚಿವರಾಗಿದ್ದ ಅಲೀನಾ ಗೋವಾ ವಿಧಾನಸಭೆಯ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಸದ್ಯ ಸಲ್ದಾನಾ ರಾಜಿನಾಮೆ ರಾಜ್ಯ ಬಿಜೆಪಿ ಪಾಲಿಗೆ ಆಘಾತಕಾರಿ ಬೆಳವಣಿಗೆಯಾಗಿದೆ. ಪ್ರಸಕ್ತ ವಿಧಾನಸಭಾ ಅವಧಿಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಮೊದಲ ಶಾಸಕಿಯಾಗಿದ್ದಾರೆ. ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.
ಈ ಬೆಳವಣಿಗೆಗೆ ಸ್ಪಂದಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತಾನಾವಡೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಸಲ್ದಾನಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. "ಶಾಸಕಿ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಲಾಗುವುದು" ಎಂದು ಪ್ರಕಟಿಸಿದ್ದಾರೆ.
ಸ್ಪೀಕರ್ ರಾಜೇಶ್ ಪಠಾಣ್ ಕರ್ ಇನ್ನೂ ರಾಜೀನಾಮೆಯನ್ನು ಸ್ವೀಕರಿಸಿಲ್ಲ.
"ಮೌಲಿಕ ಕಾರಣಕ್ಕಾಗಿ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ಬಹುಶಃ ಎಲ್ಲ ತತ್ವಗಳನ್ನು ಮರೆತಿದೆ ಹಾಗೂ ರಾಜ್ಯದ ಸ್ಥಿತಿ ದಯನೀಯವಾಗಿದೆ. ಪಕ್ಷಕ್ಕೆ ಯಾರು ಬರುತ್ತಿದ್ದಾರೆ ಹಾಗೂ ಪಕ್ಷದಿಂದ ಯಾರು ಹೊರಹೋಗುತ್ತಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ" ಎಂದು ಸಲ್ದಾನಾ ಹೇಳಿದ್ದಾರೆ.
PublicNext
17/12/2021 01:41 pm