ಬೆಂಗಳೂರು: ರಾಜಕಾಲುವೆ ಒತ್ತುವರಿ ವಿಷಯದಲ್ಲಿ ಮಹದೇವಪುರ ಕ್ಷೇತ್ರ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ 'ಆಮ್ ಆದ್ಮಿ' ಮಾಡುತ್ತಿರುವ ಸುಳ್ಳು ಆರೋಪಗಳನ್ನೆಲ್ಲ ಬಿಜೆಪಿ ನಾಯಕರು ಖಂಡಿಸಿದ್ದಾರೆ.
ಮಹದೇವಪುರ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ರೈನ್ ಬೋ ಡ್ರೈವ್ ಬಡಾವಣೆ ರಾಜಕಾಲುವೆ ಒತ್ತುವರಿ ಮಾಡಿ, ಕಟ್ಟಡ ನಿರ್ಮಾಣ ಮಾಡಿದ ವಿಚಾರದಲ್ಲಿ ಶಾಸಕರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದರು.
ಶಾಸಕ ಅರವಿಂದ ಲಿಂಬಾವಳಿ 2008ರಲ್ಲಿ ಶಾಸಕರಾಗುವ ಮೊದಲೇ ಹಾಲನಾಯಕನ ಹಳ್ಳಿ ಹಾಗೂ ಜುನ್ನಸಂದ್ರ ಭಾಗದಲ್ಲಿ ರೈನ್ ಬೋ ಡ್ರೈವ್ ಬಡಾವಣೆ ನಿರ್ಮಾಣವಾಗಿತ್ತು. ಆಮ್ ಆದ್ಮಿ ಪಕ್ಷದವರು ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ, ಪಕ್ಷದ ಪ್ರಚಾರಕ್ಕೆ ಪ್ರಭಾವಿ ನಾಯಕರ ವಿರುದ್ದ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಪದೇ ಪದೆ ಸುಳ್ಳು ಆರೋಪ ಮಾಡಿದರೆ ಆಮ್ ಆದ್ಮಿ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ರಾಜಕಾಲುವೆಯನ್ನು ಬಡಾವಣೆ ನಿರ್ಮಾಣ ಮಾಡಿದವರು ಒತ್ತುವರಿ ಮಾಡಿಕೊಂಡಿದ್ದರೆ, ಅದರ ವಿರುದ್ಧ ಶಾಸಕರು ಸಹ ರಾಜಕಾಲುವೆ ಒತ್ತುವರಿ ಸಂಬಂಧಿಸಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೂಚಿಸಿದ್ದಾರೆ. 2014ರಲ್ಲಿ ತಹಸೀಲ್ದಾರ್ ತೆರವು ಮಾಡಲು ಆದೇಶ ನೀಡಿದ್ದರು. ನಿವಾಸಿಗಳು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿದೆ ಎಂದು ವಿವರಿಸಿದರು.
PublicNext
20/11/2021 06:02 pm