ದಾವಣಗೆರೆ: ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ 7.5 ಮೀಸಲಾತಿ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ವಾಲ್ಮೀಕಿ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ಹರಿಹರ ತಾಲೂಕಿನ ವಾಲ್ಮೀಕಿ ಪೀಠದಲ್ಲಿ ಸಮಾಜದ ಮುಖಂಡರು ಹಾಗೂ ರಾಜಕೀಯ ಮುಖಂಡರ ಜೊತೆ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮೊನ್ನೆ ಹಾನಗಲ್ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಏನಾಯ್ತು. ನಮ್ಮ ಸಮುದಾಯದ 18 ಸಾವಿರ ಮತದಾರರು ಬುದ್ದಿ ಕಲಿಸಿದ್ದಾರೆ. ಈ ಮೆಸೇಜ್ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಿದೆ. ಮುಂದೆ ವಿಧಾನಸಭೆ ಚುನಾವಣೆ ಬರುತ್ತೆ. ಆಗ ನಮ್ಮ ಶಕ್ತಿ ಏನೆಂಬುದು ಗೊತ್ತಾಗುತ್ತೆ. ಕಾದು ನೋಡಲಿ ಎಂದು ಹೇಳಿದರು.
ಊರಿಗೆ ಬಂದಾಕೆ ನೀರಿಗೆ ಬರಲೇಬೇಕು ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ ಶ್ರೀಗಳು ಚುನಾವಣೆ ಬಂದಾಗ ನಾವು ಬೇಕು. ಆಮೇಲೆ ಬೇಡವೇ. ಯಡಿಯೂರಪ್ಪ ಸಿಎಂ ಆಗಿದ್ದಾಗ ಶೇಕಡಾ 7.5ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದರೂ ಕಾರ್ಯರೂಪಕ್ಕೆ ಬರಲಿಲ್ಲ. ಈಗ ಬಸವರಾಜ್ ಬೊಮ್ಮಾಯಿ ಅವರೂ ಸಹ ನೆಪವೊಡ್ಡಿ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ವಾಮೀಜಿ ಕಣ್ಣೀರು:
ಮೀಸಲಾತಿ ಸಿಗದೆ ಜನರು ಅನುಭವಿಸುತ್ತಿರುವ ಕಷ್ಟಕ್ಕೆ ಸ್ವಾಮೀಜಿ ಕಣ್ಣೀರು ಹಾಕಿದ ಘಟನೆಯೂ ಸಭೆಯಲ್ಲಿ ನಡೆಯಿತು. ನಮ್ಮ ಸಮುದಾಯದ ಜನ ವಾಲ್ಮೀಕಿ ಜಾತ್ರೆಗೆ ಚಾಮರಾಜನಗರ-ಬೀದರ್ ನಿಂದ ಬರುತ್ತಾರೆ. ದೂರದ ಊರಿನಿಂದ ವಾಹನಗಳನ್ನ ಮಾಡಿಕೊಂಡು ಬಂದಿರುತ್ತಾರೆ. ಯಾರಿಗೂ ಯಾವುದೇ ರೀತಿ ತೊಂದರೆ ಆಗಬಾರದು. ಮುಂದಿನ ವರ್ಷ ಫೆ 8, 9 ರಂದು ವಾಲ್ಮೀಕಿ ಜಾತ್ರೆ ನಡೆಯುತ್ತೆ. ದೂರದ ಊರಿನಿಂದ ಲಕ್ಷಂತಾರ ಜನ ಬಂದಿರುತ್ತಾರೆ. ಅವರು ಬಂದು ನೆಮ್ಮದಿಯಾಗಿ ಊಟ ಮಾಡಬೇಕು. ಜಾತ್ರೆಯಲ್ಲಿ ಪಾಲ್ಗೊಂಡು ಬಳಿಮ ಅವರು ಸುರಕ್ಷಿತವಾಗಿ ಊರು ಸೇರಬೇಕು. ಅವಾಗ ನನಗೆ ನೆಮ್ಮದಿಯಾಗುತ್ತೆ ಅಂತ ಸ್ವಾಮೀಜಿ ಕಣ್ಣೀರು ಹಾಕಿದರು.
PublicNext
10/11/2021 03:35 pm