ಮಂಗಳೂರು: ಸಾವರ್ಕರ್ ಬ್ರಿಟಿಷರ ವಿರುದ್ಧ ಹೋರಾಟ ಮಾಡ್ಲಿಲ್ಲ ಎಂದು ಯಾರೂ ಹೇಳಿಲ್ಲ. ಬ್ರಿಟಿಷರ ವಿರುದ್ಧ ಭಾರತಕ್ಕಾಗಿ ಸಾವರ್ಕರ್ ಹಾಗೆಯೇ ಅನೇಕ ಮಂದಿ ಹೋರಾಡಿದ್ದಾರೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಮಂಗಳೂರಲ್ಲಿ ಇವತ್ತು ಹೇಳಿಕೆ ನೀಡಿದ್ದಾರೆ.
ಬಹಳಷ್ಟು ಮಂದಿ ಸಾವರ್ಕರ್ ರಂತೆ ಅಂಡಮಾನ್ ಜೈಲಲ್ಲಿ ಇದ್ದರು. ಅನೇಕ ಸ್ವಾತಂತ್ರ್ಯ ಯೋಧರು ಅಂಡಮಾನ್ ನಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಸಾವನ್ನಪ್ಪಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಂದಿಯನ್ನು ಬ್ರಿಟಿಷರು ಕೊಂದು ಹಾಕಿದ್ದಾರೆ. ಬಹಳಷ್ಟು ಮಂದಿಯನ್ನು ನೇಣಿಗೆ ಹಾಕಿ ಕೊಲ್ಲಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ಹೋದ ವೇಳೆ ತಪ್ಪೊಪ್ಪಿಗೆ ಪತ್ರವನ್ನು ಸಾವರ್ಕರ್ ಕೊಟ್ಟಿರುವುದು ತಪ್ಪಲ್ಲವೇ ಎಂದು ಶಾಸಕ ಖಾದರ್ ಪ್ರಶ್ನೆ ಮಾಡಿದರು.
ತಪ್ಪೊಪ್ಪಿಗೆ ಪತ್ರವನ್ನು ಬ್ರಿಟಿಷರಿಗೆ ಕೊಟ್ಟವರು ನಿಜವಾದ ಸ್ವಾತಂತ್ರ್ಯ ಯೋಧರಾ ಎಂದು ಪ್ರಶ್ನಿಸಿದರು. ಇನ್ನು ಮಹಾತ್ಮ ಗಾಂಧಿ ಅವರ ಹತ್ಯೆ ಹಿಂದೆ ಸಾವರ್ಕರ್ ಹೆಸರು ಕೂಡ ಬಂದಿರುವುದು ಗಂಭೀರ ವಿಚಾರವಾಗಿದ್ದು, ಇದು ಚರ್ಚಾಸ್ಪದವೂ ಹೌದು. ಹೀಗಾಗಿ ಸಾವರ್ಕರ್ ಹೆಸರನ್ನು ಇಡುವವರು ಒಮ್ಮೆ ಆತ್ಮಾವಲೋಕನ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.
PublicNext
06/11/2021 03:37 pm