ಕಲಬುರಗಿ: ನಾನೇಕೆ ಅವರ ಬಳಿ ಜಗಳ ಮಾಡಲಿ? ನನಗೇನು ಮಾಡಲು ಬೇರೆ ಕೆಲಸ ಇಲ್ವಾ? ಸಿದ್ದರಾಮಯ್ಯ ಅವರು ತಾವೇ ಮೊದಲಾಗಿ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾರೆ. ಮೊದಲು ಅವರು ಆ ಕೆಲಸ ನಿಲ್ಲಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸಿಂದಗಿ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ತೆರಳುವ ವೇಳೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನನಗೆ ಮಾಡೊಕೆ ಸಿಕ್ಕಾಪಟೆ ಕೆಲಸಗಳಿವೆ, ನಾನೇಕೆ ಅವರ ಹೆಸರಿಗೆ ಹೋಗಲಿ? ಅಂತಿಮವಾಗಿ ನಾನು ಜಗಳಕ್ಕೆ ಮಂಗಳರಾತಿ ಹಾಡೋಕೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತೆ. ಬೇಕಾದಷ್ಟು ಕೆಲಸ ಇದೆ. ಸಿಂದಗಿ ಉಪಚುನಾಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಐದು ದಿನಗಳ ಕಾಲ ಪ್ರಚಾರಕ್ಕೆ ಬಂದಿದ್ದೇನೆ ಎಂದರು.
ಇದೇ ವೇಳೆ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸದ ಕುಮಾರಸ್ವಾಮಿ, ಜಮೀರ್ ಅಹ್ಮದ್ ನನಗೆ ಈಗಿನ ಸ್ನೇಹಿತ ಅಲ್ಲ. ಹಳೆಯ ಸ್ನೇಹಿತ. ಅವರ ಬಗ್ಗೆ ನಾನು ಮಾತಾಡಲ್ಲ. ಮೇಲೆ ದೇವರಿದ್ದಾನೆ. ಆ ದೇವರೇ ಎಲ್ಲವನ್ನೂ ನೋಡಿಕೊಳ್ತಾನೆ ಎಂದ ಕುಮಾರಸ್ವಾಮಿ ಆಕಾಶದತ್ತ ಬೆರಳು ತೋರಿಸಿದ್ದಾರೆ.
ಇನ್ನು ಪುಟಗೋಸಿ ವಿರೋಧ ಪಕ್ಷದ ಸ್ಥಾನದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ನಾನು ವಿರೋಧ ಪಕ್ಷದ ಸ್ಥಾನಕ್ಕೆ ನಾನು ಗೌರವ ಕೊಡುತ್ತೇನೆ. ಆದ್ರೆ ಆ ಸ್ಥಾನದಲ್ಲಿರುವ ಸಿದ್ದರಾಮಯ್ಯ ನಡವಳಿಕೆ ಬಗ್ಗೆಯಷ್ಟೇ ನಾನು ಮಾತಾಡಿದ್ದೇನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ದನಾಗಿದ್ದೇನೆ. ಕಾಂಗ್ರೆಸ್- ಬಿಜೆಪಿ ಎರಡು ಪಕ್ಷಗಳೂ ಪರ್ಸೆಂಟೆಸ್ ತೆಗೆದುಕೊಳ್ಳುವುದರಲ್ಲಿ ಮುಂದಿದ್ದಾರೆ. ರಾಜ್ಯದಲ್ಲಿರುವ ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಹಣ ಲೂಟಿಹೊಡೆಯುತ್ತಿವೆ. ಈ ಪಕ್ಷಗಳನ್ನು ಅಧಿಕಾರದಿಂದ ದೂರ ಇಡಲು ರಾಜ್ಯದ ಜನ ಮನಸ್ಸು ಮಾಡಬೇಕು ಎಂದರು.
PublicNext
19/10/2021 11:33 am