ಚಂಡೀಗಢ : ಪಂಜಾಬ್ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಚುನಾವಣಾ ಹೊಸ್ತಿಲಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿರುವುದು ಸಂಚಲನ ಸೃಷ್ಟಿಸಿದೆ. ಸಿಎಂ ಸ್ಥಾನ ಸಿಕ್ಕಿಲ್ಲ ಹಾಗೂ ಸಚಿವ ಸಂಪುಟ ವಿಸ್ತರಣೆಯಲ್ಲೂ ತನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟಿಲ್ಲ ಎಂದು ಬೇಸತ್ತ ಸಿಧು ರಾಜೀನಾಮೆ ನೀಡಿ ರಾಜಕೀಯ ಒತ್ತಡ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇತ್ತ ಸಿಧು ರಾಜೀನಾಮೆ ಬೆನ್ನಲ್ಲೇ ಮಾಜಿ ಸಿಎಂ ಕ್ಯಾಪ್ಟನ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು ಸಿಧು ರಾಜೀನಾಮೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಾನು ಮೊದಲೇ ಹೇಳಿದ್ದೆ ಅವರೊಬ್ಬ ಸ್ಥಿರ ವ್ಯಕ್ತಿಯಲ್ಲ, ಹಾಗೂ ಗಡಿ ರಾಜ್ಯವಾದ ಪಂಜಾಬ್ ನಾಯಕರಾಗಲು ಸೂಕ್ತರಲ್ಲ ಎಂದಿದ್ದಾರೆ.
ಶಾಸಕರ ವಿರೋಧದ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕ್ಯಾಪ್ಟನ್ ರಾಜೀನಾಮೆ ನಂತರ ಸಿಧು ಸ್ವತಃ ಮುಖ್ಯಮಂತ್ರಿಯಾಗಲು ಬಯಸಿದ್ದರೂ, ಕಾಂಗ್ರೆಸ್ ಹೈಕಮಾಂಡ್, ದಲಿತ ಕಾರ್ಡ್ ಮುಂದಿಟ್ಟು, ಚರಣ್ಜಿತ್ ಸಿಂಗ್ ಚನ್ನಿಯನ್ನು ಪಂಜಾಬಿನ ಮುಖ್ಯಮಂತ್ರಿಯನ್ನಾಗಿ ಮಾಡಿತು. ಇದು ಸಿಧುವನ್ನು ಮತ್ತಷ್ಟು ಕೋಪಕ್ಕೀಡು ಮಾಡಿತ್ತು ಎನ್ನಲಾಗಿದೆ.
PublicNext
28/09/2021 06:38 pm