ದಾವಣಗೆರೆ: ಚುನಾವಣೆ ಬರಲಿ, ಯಾರ್ಯಾರು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬರುತ್ತಾರೆ ಎಂಬುದನ್ನು ಪರದೆ ಮೇಲೆ ನೀವೇ ನೋಡ್ತೀರಾ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾರ್ಯಾರು ಬರುತ್ತಾರೆ ಎಂದು ಈಗಲೇ ಹೇಳುವುದಿಲ್ಲ. ಸೇರಿಸಿಕೊಳ್ಳುವ ಬಗ್ಗೆ ಈಗಾಗಲೇ ಚರ್ಚೆ ಮಾಡುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬುದಾಗಿ ಹೇಳಿರುವುದು ಶುದ್ಧ ಸುಳ್ಳು. ಯಾವುದೇ ವಿಚಾರ ನಮ್ಮಲ್ಲಿ ಇಲ್ಲ. ನಾವೆಲ್ಲರೂ ಸುಭದ್ರವಾಗಿದ್ದೇವೆ. ಮುಂದಿನ ಚುನಾವಣೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿಯೇ ಎದುರಿಸುತ್ತೇವೆ. ಇನ್ನು ಕಾಂಗ್ರೆಸ್ ಕಡೆಯಿಂದಲೇ ಬಿಜೆಪಿಗೆ ಬರಲು ಸಜ್ಜಾಗಿದ್ದಾರೆ. ಬೊಮ್ಮಾಯಿ ಅವರ ಆಡಳಿತ ಮೆಚ್ಚಿ ಬರಲು ಸಿದ್ದರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಯಾರ್ಯಾರು ಬರುತ್ತಾರೆ ಎಂಬುದನ್ನು ಹೇಳುತ್ತೇನೆ. ಈಗಲೇ ಹೇಳಲು ಆಗದು. ಕಾಂಗ್ರೆಸ್ ನ ಬಹಳಷ್ಟು ಸದಸ್ಯರು ತುದಿಗಾಲ ಮೇಲೆ ನಿಂತಿರುವುದಂತೂ ಸತ್ಯ ಎಂದು ಭೈರತಿ ಬಸವರಾಜ್ ತಿಳಿಸಿದರು.
PublicNext
27/09/2021 05:55 pm