ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರಿಂದಲೇ ನಾನು 2 ಬಾರಿ ಶಾಸಕನಾದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ವಿಧಾನಸಭೆಯಲ್ಲಿ ನಿನ್ನೆ (ಮಂಗಳವಾರ) ಅನುದಾನ ತಾರತಮ್ಯ ಕುರಿತು ನಡೆದ ಚರ್ಚೆಯಲ್ಲಿ ರೇವಣ್ಣ, ಆಡಳಿತ ಪಕ್ಷದ ಸದಸ್ಯರಿಗೆ 20 ಕೋಟಿ ರೂ. ನೀಡಿದರೆ ನಮಗೆ ಐದಾರು ಕೋಟಿ ರೂ. ಆದರೂ ಕೊಡಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಶಿವಲಿಂಗೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಕೊಟ್ಟಿದ್ದಾರೆ. ಪದೇ ಪದೇ ಕೊಟ್ಟಿಲ್ಲ ಎಂದು ಹೇಳಿ ಅವರ ಮನಸ್ಸು ನೋಯಿಸಬೇಡಿ. ದಯವಿಟ್ಟು ರೇವಣ್ಣ ಅವರಿಗೆ 10 ಕೋಟಿಯಾದರೂ ಕೊಟ್ಟುಬಿಡಿ. ಇಲ್ಲದಿದ್ದರೆ ಅವರು ನಮ್ಮನ್ನು ಸುಮ್ಮನೆ ಬಿಡಲ್ಲ ಎಂದು ರೇಗಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರಿಂದಲೇ ನಾನು ಎರಡು ಬಾರಿ ವಿಧಾನಸಭೆಗೆ ಬಂದಿದ್ದೇನೆ. 300 ಕೋಟಿ ರೂ. ಅನ್ನು 530 ಹಳ್ಳಿಗಳಿಗೆ ನೀಡಿದ್ದಾರೆ. ಎತ್ತಿನ ಹೊಳೆ ಯೋಜನೆಯನ್ನು ಮಂಜೂರು ಮಾಡಿದ್ದಾರೆ. ಇದನ್ನು ಬಹಿರಂಗವಾಗಿ ಈ ಹಿಂದೆಯೂ ಹೇಳಿದ್ದೇನೆ ಎಂದು ಶಿವಲಿಂಗೇಗೌಡ ಅವರು ರೇವಣ್ಣ ಅವರಿಗೆ ತಿರುಗೇಟು ನೀಡಿದರು. ಇದರ ಮಧ್ಯೆ ಕಾಂಗ್ರೆಸ್ ಶಾಸಕ ಡಾ. ರಂಗನಾಥ್, ಶಿವಲಿಂಗಣ್ಣ ನಮ್ಮ ಪಕ್ಷಕ್ಕೆ ಬಂದು ಬಿಡಿ ಎಂದು ಹೇಳಿದರು.
PublicNext
22/09/2021 10:25 am