ಭೋಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಅಧಿಕಾರಶಾಹಿ ಏನೂ ಅಲ್ಲ, ಅವರು ಇರುವುದು ನಮ್ಮ ಚಪ್ಪಲಿಗಳನ್ನು ಎತ್ತಿಕೊಳ್ಳಲು. ಅವರಿಗೆ ಯಾವುದೇ ಸ್ವಂತ ನಿಲುವು ಇರುವುದಿಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಉಮಾ ಭಾರತಿ ಅವರ ಈ ವಿವಾದಾತ್ಮಕ ಹೇಳಿಕೆ ವಿಡಿಯೋ ವೈರಲ್ ಆಗಿದೆ.
ಅಧಿಕಾರಿಗಳು ನಮ್ಮ ಚಪ್ಪಲಿಗಳನ್ನು ಎತ್ತಿಕೊಳ್ಳುತ್ತಾರೆ. ನಾನು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ, ಮಧ್ಯ ಪ್ರದೇಶ ಸಿಎಂ ಆಗಿ ಮತ್ತು ನಂತರ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಶಾಹಿ ಎಂದರೆ ಏನು ಎಂದು ನನಗೆ ಚೆನ್ನಾಗಿ ತಿಳಿದಿದೆ ಎಂದು ಉಮಾ ಭಾರತಿ ಹೇಳಿದ್ದಾರೆ.
ರಾಜಕಾರಣಿಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅದರ ನಂತರವೇ ಫೈಲ್ ಪ್ರಕ್ರಿಯೆಗೆ ಮುಂದಾಗುತ್ತದೆ ಎಂದು ಉಮಾ ಭಾರತಿ ಅವರು ಶನಿವಾರ ಭೋಪಾಲ್‌ನ ತಮ್ಮ ನಿವಾಸದಲ್ಲಿ ಒಬಿಸಿ ನಿಯೋಗದೊಂದಿಗೆ ನಡೆದ ಸಂವಾದದಲ್ಲಿ ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆಯ ವಿಡಿಯೋ ಸೋಮವಾರ ವೈರಲ್ ಆಗಿದ್ದು, ತಮ್ಮ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದಂತೆ ಬಿಜೆಪಿ ನಾಯಕಿ ವಿಷಾದ ವ್ಯಕ್ತಪಡಿಸಿದ್ದಾರೆ. "ನನ್ನ ಉದ್ದೇಶಗಳು ಒಳ್ಳೆಯದಾಗಿದ್ದರೂ ಅಸಮಂಜಸವಾದ ಭಾಷೆ ಬಳಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ನನ್ನ ಅನುಭವದಿಂದ, ಪ್ರಾಮಾಣಿಕ ಅಧಿಕಾರಶಾಹಿ ಯಾವಾಗಲೂ ಬಲವಾದ ಮತ್ತು ಪ್ರಾಮಾಣಿಕ ರಾಜಕಾರಣಿಗಳಿಗೆ ಉತ್ತಮ ಕಂಪನಿ ನೀಡುತ್ತದೆ ಎಂದು ಹೇಳಬಲ್ಲೆ' ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.
PublicNext
21/09/2021 07:53 am