ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಉದ್ಯಮಿ ಮೇಲೆ ಹಲ್ಲೆ ಮಾಡಿರುವ ಪ್ರಕರಣದ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿ ನಾಯಕರು, ನಾಯಕರ ಮಕ್ಕಳು ಕಂಡ ಕಂಡಲ್ಲಿ ಕುಡಿದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದರ ಬದಲು 'ಬಾರ್ ಸಲಹೆಗಾರ' ಸಿಟಿ ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಚೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ. ಅಲ್ಲೇ ಕುಡಿದುಕೊಳ್ಳಲಿ, ಅಲ್ಲೇ ಬಡಿದುಕೊಳ್ಳಲಿ, ಜನರಿಗೆ ತೊಂದರೆ ಕೊಡುವುದನ್ನ ಬಿಡಲಿ' ಎಂದು ಕಿಡಿಕಾರಿದೆ.
ಮಾನಪ್ಪ ವಜ್ಜಲ್‌ರ ಪುತ್ರರಿಂದ ಮಾರಣಾಂತಿಕ ಹಲ್ಲೆ ನಡೆದರೂ ದೂರು ದಾಖಲಿಸಲಿಲ್ಲ. ಶಾಸಕ ಸಿದ್ದು ಸವದಿಯವರಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದರೂ ಬಂಧನವಿಲ್ಲ, ಮಾಜಿ ಸಚಿವರು ಅತ್ಯಾಚಾರ ಎಸಗಿದರೂ ಬಂಧನವಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಆಡಳಿತದಲ್ಲಿ ಉತ್ತರ ಪ್ರದೇಶ ಮಾಡೆಲ್ ಅನುಸರಿಸಿ ಕರ್ನಾಟಕವನ್ನು 'ಗೂಂಡಾರಾಜ್' ಆಗಿ ಪರಿವರ್ತಿಸುತ್ತಿದೆ ಎಂದು ಟೀಕಿಸಿದೆ.
ಹಿಂದೆ ಗೋವಿಂದ್ ಕಾರಜೋಳರ ಪುತ್ರ ಪೊಲೀಸರಿಗೆ 'ಬಾಯಲ್ಲಿ ಬೂಟು ಇಡುತ್ತೇನೆ' ಎಂದು ಬೆದರಿಕೆಯೊಡ್ಡಿದ್ದ. ಇಂದು ಮಾನಪ್ಪ ವಜ್ಜಲ್ ಪುತ್ರರು ನಶೆಯಲ್ಲಿ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಜೆಪಿ ನಾಯಕರು ತಮ್ಮ ಪುತ್ರರನ್ನು ರೌಡಿಗಳನ್ನಾಗಿ ತಯಾರು ಮಾಡುತ್ತಿರುವಂತಿದೆ ಎಂದು ಲೇವಡಿ ಮಾಡಿದೆ.
PublicNext
17/09/2021 07:59 pm