ದಾವಣಗೆರೆ: ಇದೇ ತಿಂಗಳ ಸೆಪ್ಟಂಬರ್ 18ರಂದು ನಡೆಯುವ ಬಿಜೆಪಿ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ, ಕೋರ್ ಕಮಿಟಿ ಮೀಟಿಂಗ್ ಹಾಗೂ 19ರ ಬಿಜೆಪಿ ಕಾರ್ಯಕಾರಿಣಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಲ್ಲಾ ಕಡೆಗಳಲ್ಲಿಯೂ ಪಕ್ಷದ ಬಾವುಟ, ಬ್ಯಾನರ್, ಬಂಟಿಂಗ್ಸ್ ಅಳವಡಿಸಲಾಗಿದೆ. ನಾಯಕರ ಭವ್ಯ ಸ್ವಾಗತಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಸಂಜೆ 6.30ಕ್ಕೆ ನಗರದ ಅಪೂರ್ವ ರೆಸಾರ್ಟ್‌ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಜರುಗಲಿದೆ.ಸೆ.19ರ ಬೆಳೆಗ್ಗೆ 10ಕ್ಕೆ ತ್ರಿಶೂಲ್ ಕಲಾಭವನದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಧ್ವಜಾರೋಹಣೆ ಮೂಲಕ ಚಾಲನೆ ನೀಡಲಾಗುತ್ತಿದೆ.ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸಲಿದ್ದಾರೆ. ಸಭೆಗೆ 680 ಅಪೇಕ್ಷಿತರಿದ್ದರು. ಆದರೆ 574 ಗಣ್ಯರು ಮಾತ್ರ ಭಾಗವಹಿಸಲಿದ್ದಾರೆ ಎಂದರು.
ಅಪೇಕ್ಷಿತರಿಗೆ ಮಾತ್ರ ಸಭೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ನಿಯಮಾವಳಿಗಳ ಮೂಲಕ ಸಭೆ ನಡೆಯಲಿದೆ. ಸಭೆಗೆ ಆಗಮಿಸುವ ಗಣ್ಯರಿಗೆ ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ನಡೆಸಲಾಗಿದೆ. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಫ್ಲೆಕ್ಸ್ ಹಾಗೂ ಬ್ಯಾನರ್ ಗಳೊಂದಿಗೆ ಸ್ವಾಗತ ಕೋರಲಾಗಿದ್ದು ನಗರದೆಲ್ಲೆಡೆ ಬಿಜೆಪಿ ಪಕ್ಷದ ಬಾವುಟಗಳಿಂದ ಅಲಂಕರಿಸಲಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸರಳ ವ್ಯಕ್ತಿ. ಅದಕ್ಕಾಗಿಯೇ ವರಿಷ್ಠರು ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಮುಂದೆ ಇನ್ನೂ ಉತ್ತಮ ಕಾರ್ಯ ಮಾಡುತ್ತಾರೆಂಬ ಭರವಸೆ ಇದೆ ಎಂದು ತಿಳಿಸಿದರು.
ದಾವಣಗೆರೆ ಬೆಣ್ಣೆ ದೋಸೆ, ಮಿರ್ಚಿ ಮಂಡಕ್ಕಿ, ಜೋಳ ಹಾಗೂ ಸಜ್ಜೆ ರೊಟ್ಟಿ ಸೇರಿದಂತೆ ಇಲ್ಲಿನ ಖಾದ್ಯಗಳ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
PublicNext
17/09/2021 03:38 pm