ಬೆಂಗಳೂರು/ನವದೆಹಲಿ: ರಾಜ್ಯದ ವಿವಿಧ ಯೋಜನೆ ಹಾಗೂ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲೆಂದೇ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಸರ್ಕಾರಿ ಕಾರ್ಯಕ್ರಮಗಳ ನೆಪವೊಡ್ಡಿ ದೆಹಲಿಗೆ ಬಂದರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಹುಬ್ಬಳ್ಳಿಯಲ್ಲಿ ವಿವಾಹ ಸಮಾರಂಭ ಹಾಗೂ ಆರತಕ್ಷತೆ, ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಬಹುತೇಕ ಸಚಿವರು, ಶಾಸಕರು ಹುಬ್ಬಳ್ಳಿ ಅಥವಾ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈಗ ಸರ್ಕಾರಿ ಕೆಲಸದ ನೆಪ ಹೇಳಿ ದೆಹಲಿಗೂ ಬಂದು ಆರತಕ್ಷತೆಯಲ್ಲಿ ಪಾಲ್ಗೊಳ್ಳುವ ಉದ್ದೇಶವೇನು? ಎಂಬುದು ಬಿಜೆಪಿ ವಲಯದಲ್ಲಿಯೇ ಚರ್ಚೆಗೀಡಾಗಿದೆ.
ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ಮಿತವ್ಯಯ ಸಾಧಿಸುವ ಬಗ್ಗೆ ಮಾತನಾಡಿದಾಗ ಜನ ವಿಶ್ವಾಸವನ್ನಿಟ್ಟಿದ್ದರು. ಆದರೀಗ, ಇದೆಯಾ ಮಿತವ್ಯಯ ಎಂಬ ಪ್ರಶ್ನೆ ಮೂಡುವಂತಾಗಿದೆ. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ನೀತಿಯನ್ನು ಬೊಮ್ಮಾಯಿ ಸಹ ಅನುಸರಿಸಿದರೆ ಎಂಬ ಟೀಕೆಯೂ ವ್ಯಕ್ತವಾಗಿದೆ. ಜೋಶಿ ಪುತ್ರಿ ಆರತಕ್ಷತೆ ಕಾರ್ಯಕ್ರಮಕ್ಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು. ಮನಸ್ಸು ಮಾಡಿದ್ದರೆ ಆ ಸಂದರ್ಭದಲ್ಲೇ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವರಿದ್ದ ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಬಹುದಿತ್ತು. ದಿಲ್ಲಿಗೆ ಪ್ರತ್ಯೇಕವಾಗಿ ಮತ್ತೊಮ್ಮೆ ಹೋಗುವ ಅಗತ್ಯವಿತ್ತೇ ಎಂದು ಬಿಜೆಪಿ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.
ಬೊಮ್ಮಾಯಿ ಮಾತ್ರವಲ್ಲ ರಾಜ್ಯ ಸಚಿವ ಸಂಪುಟದ ಬಹುತೇಕ ಸಹೋದ್ಯೋಗಿಗಳದ್ದೂ ಇದೇ ಕಥೆ. ಆರ್.ಅಶೋಕ್, ವಿ.ಸೋಮಣ್ಣ, ಕೆ.ಎಸ್.ಈಶ್ವರಪ್ಪ, ಶಂಕರ್ ಪಾಟೀಲ್ ಮುನೇನಕೊಪ್ಪ, ಹಾಲಪ್ಪ ಆಚಾರ್ ಸೇರಿ ಹಲವು ಸಚಿವರು ಆರತಕ್ಷತೆಯಲ್ಲಿ ಪಾಲ್ಗೊಳ್ಳಲೆಂದೇ ದೆಹಲಿಗೆ ಬಂದಿದ್ದಾರೆ. ಮಂಡಳಿಗಳ ಕೆಲವು ಅಧ್ಯಕ್ಷರೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ದಿಲ್ಲಿ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಬಿಜೆಪಿಯ ಅನೇಕ ಹಿರಿಯ ನಾಯಕರು ಮತ್ತು ಕೇಂದ್ರ ಸಚಿವರೂ ಪಾಲ್ಗೊಳ್ಳುತ್ತಿದ್ದಾರೆ. ಅವರೆಲ್ಲರ ಮುಂದೆ ತಮ್ಮ ಇರುವಿಕೆ ತೋರಿಸಿಕೊಳ್ಳುವ ಉದ್ದೇಶವೂ ಇರಬಹುದು ಎಂಬ ಮಾತುಗಳು ಬಿಜೆಪಿ ನಾಯಕರ ಮಧ್ಯೆಯೇ ಸುಳಿದಾಡುತ್ತಿವೆ.
ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಕರೊನಾ ಸಂದರ್ಭ ಮದುವೆಗೆ ಸಾವಿರಾರು ಜನ ಭಾಗವಹಿಸಿದ್ದರು. ಮಾಸ್ಕ್, ಸಾಮಾಜಿಕ ಅಂತರ ಸೇರಿ ಕರೊನಾ ನಿಯಮಾವಳಿಗಳು ಪಾಲನೆಯಾಗಿಲ್ಲ. ಸ್ವತಃ ಮುಖ್ಯಮಂತ್ರಿಯೇ ಅಲ್ಲಿದ್ದು ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಈಗ ಟೀಕೆಗೂ ಒಳಗಾಗಿದೆ. ಮದುವೆಗೆ 400 ಜನರಿಗೆ ಅನುಮತಿ ನೀಡಿದ್ದೇ ಈ ಮದುವೆಯ ಕಾರಣಕ್ಕಾ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ. ಗಣೇಶೋತ್ಸವಕ್ಕೆ ಅನುಮತಿ ನೀಡಲು ಸಾಕಷ್ಟು ಸತಾಯಿಸಿದ ಸರ್ಕಾರ, ಮದುವೆ ಯಲ್ಲಿ ಏಕೆ ನಿಯಮಾವಳಿಗಳ ಉಲ್ಲಂಘನೆಗೆ ಅವಕಾಶ ಮಾಡಿಕೊಡಲಾಯಿತು ಎಂಬ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಚರ್ಚೆಯಾಗುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.
ಬೊಮ್ಮಾಯಿ ನೇತೃತ್ವಕ್ಕೆ ಜಯ
ನವದೆಹಲಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ರಾಜ್ಯ ಬಿಜೆಪಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವಕ್ಕೆ ಜಯ ಸಿಕ್ಕಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನ ಒಪ್ಪಿದ್ದಾರೆ. ಮುಂದೆಯೂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಾಡಿರುವ ಕೆಲಸಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. 2023ರಲ್ಲಿ ಮತ್ತೆ ನಾವು ಅಧಿಕಾರಕ್ಕೆರಲಿದ್ದೇವೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಗಳ ಮದುವೆ ಆರತಕ್ಷತೆಯಲ್ಲಿ ಭಾಗಿಯಾಗಲು ಬಂದಿದ್ದೇನೆ. ಅರುಣ್ ಸಿಂಗ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಬಗ್ಗೆ ಮಾತುಕತೆ ನಡೆಸಿದ್ದೇವೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಹಿಡಿಯಲಿದೆ. ಬೇರೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ.
| ಜಗದೀಶ ಶೆಟ್ಟರ್ ಮಾಜಿ ಸಚಿವ
ಕೃಪೆ: ವಿಜಯವಾಣಿ
PublicNext
09/09/2021 08:49 am