ಬೆಂಗಳೂರು: ಮೊಘಲರ ಆಳ್ವಿಕೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಸಮುದಾಯದವರೇ ಆರ್‌ಎಸ್‌ಎಸ್ ಸ್ಥಾಪಿಸಿ, ಉನ್ನತ ಸ್ಥಾನದಲ್ಲಿದ್ದಾರೆ. ಇವರು ನಮಗೆ ಭಾರತೀಯತೆ, ದೇಶ ಭಕ್ತಿಯ ಪಾಠ ಮಾಡುತ್ತಾರೆ ಎಂದು ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾವರ್ಕರ್ ಸೇರಿದಂತೆ ಆರ್‌ಎಸ್‌ಎಸ್‌ನ ಯಾವ ನಾಯಕನೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ. ಹೀಗಾಗಿ ಬಿಜೆಪಿ ನಾಯಕರಿಗೆ ಸ್ವಾತಂತ್ರ್ಯ ಹೋರಾಟದ ಮಹತ್ವ ತಿಳಿದಿಲ್ಲ ಮತ್ತು ಹೋರಾಟಗಾರರ ಬಗ್ಗೆ ಗೌರವವೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದ್ದೆವು. ಅದನ್ನು ದೊಡ್ಡ ಅಪರಾಧ ಎಂಬಂತೆ ಬಿಂಬಿಸಿದರು. ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನವರು ಯಾವ ಜಾತಿ? ಹಣಕಾಸು ಮಂತ್ರಿಯಾಗಿದ್ದ ಕೃಷ್ಣಸ್ವಾಮಿ ಅವರು ಯಾವ ಜಾತಿ? ಇವರ ಬಗ್ಗೆ ಬಿಜೆಪಿ ನಾಯಕರಿಗೆ ಅಸಹನೆ ಇಲ್ಲವೇ ಎಂದು ಪ್ರಶ್ನಿಸಿದರು.
ಬ್ರಿಟಿಷರ ವಿರುದ್ಧ ಹೈದರಾಲಿ ಮತ್ತು ಟಿಪ್ಪು 4 ಮಹಾಯುದ್ಧಗಳನ್ನು ಮಾಡಿದ್ದರು. ಟಿಪ್ಪು ಜಯಂತಿ ಮಾಡಿದರೆ ಬಿಜೆಪಿಯವರಿಗೆ ಕೋಪ ಬರುತ್ತೆ. ಬಿಜೆಪಿಯವರಿಗೆ ಟಿಪ್ಪು ಮೇಲಿರುವ ಕೋಪ ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನ ಮೇಲೆ ಏಕಿಲ್ಲ? ಬ್ರಿಟಿಷರು ಬರುವ ಮೊದಲು ಭಾರತ ಸಮೃದ್ಧವಾಗಿತ್ತು. ನಮ್ಮ ಜಿ.ಡಿ.ಪಿ 23% ಇತ್ತು, ಬ್ರಿಟಿಷರು ಕೊಳ್ಳೆ ಹೊಡೆದ ಪರಿಣಾಮ ಭಾರತ ಬಡದೇಶವಾಯಿತು. ಇವತ್ತು ಮತ್ತೆ ಭಾರತ ಬಡದೇಶವಾಗುತ್ತಿದ್ದರೆ ಅದಕ್ಕೆ ಬಿಜೆಪಿಯೇ ಕಾರಣ ಎಂದು ದೂರಿದರು.
ಬ್ರಿಟಿಷರು ದೇಶದ ಸಂಪತ್ತನ್ನು ಲೂಟಿ ಮಾಡಿದರೆ ಬಿಜೆಪಿಯರು.ಈಗ ದೇಶದ ಸಂಪತ್ತನ್ನು ಖಾಸಗಿಯವರಿಗೆ ಮಾರುತ್ತಿದ್ದಾರೆ. ಹೀಗಾಗಿ ಹಿಂದೆ ಬ್ರಿಟಿಷರ ವಿರುದ್ಧ ಮಾಡಿದ ಹೋರಾಟದ ಮಾದರಿಯಲ್ಲೆ ಈಗ ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಾಡಬೇಕಾಗಿದೆ ಎಂದರು.
ಕ್ವಿಟ್ ಇಂಡಿಯಾ ಚಳವಳಿ ದಿನ, ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ಪ್ರಮುಖ ದಿನಗಳಂದು ನಾವೆಲ್ಲ ತ್ಯಾಗ ಬಲಿದಾನದ ಮನಸ್ಥಿತಿ ಬೆಳೆಸಿಕೊಳ್ಳುವ ಹಾಗೂ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವ ಕೆಲಸಕ್ಕೆ ಒಂದಾಗಿ ಶ್ರಮಿಸುವ ಪ್ರತಿಜ್ಞೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
PublicNext
09/08/2021 03:56 pm