ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ
ಅಜಾತ ಶತ್ರು, ನಿಗರ್ವಿ, ಸೌಮ್ಯ ಸ್ವಭಾವದ ಜಗದೀಶ್ ಶೆಟ್ಟರ್ ಮತ್ತೆ ಮಂತ್ರಿಯಾಗದಿರಲು ನಿರ್ಧರಿಸಿದ್ದಾರೆ. ಹಿರಿತನದ ಕಾರಣಕ್ಕೆ ಬೊಮ್ಮಾಯಿ ಹೊಸ ಸಚಿವ ಸಂಪುಟ ಸೇರುವುದಿಲ್ಲ ಎಂದಿದ್ದಾರೆ.
ಮಂತ್ರಿಯಾಗಿದ್ದಾಗಲಿ, ಮುಖ್ಯಮಂತ್ರಿಯಾಗಿದ್ದಾಗಲಿ ಯಾರೇ ಬಂದರೂ ಸೌಜನ್ಯ ಹಾಗೂ ನಗುಮುಖದಿಂದ ಮಾತನಾಡುವುದು ಶೆಟ್ಟರ್ ಸ್ವಭಾವ. ಎಂದೂ ಯಾರೊಂದಿಗೂ ಕೋಪಿಸಿಕೊಂಡವರಲ್ಲ. ಪ್ರತಿಯೊಬ್ಬರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು. ಇದೇ ಕಾರಣಕ್ಕೆ ಎಲ್ಲರೂ ಅವರನ್ನು ಗೌರವಿಸುವುದು. ಇತರರಂತೆ "ಆಗ್ರೆಸ್ಸಿವ್ ಶ್ರೂಡ್ '' ರಾಜಕಾರಣಿಯಲ್ಲ. ಆದರೆ ಕೆಲವು ಬಾರಿ ರಾಜಕಾರಣದಲ್ಲಿ ಇವೂ ಅವಶ್ಯ.
" ಮಾಜಿ ಮುಖ್ಯಮಂತ್ರಿಯಾಗಿದ್ದರೂ ನಾನು ಬಿ.ಎಸ್ ಯಡಿಯೂರಪ್ಪ ಸಂಪುಟ ಸೇರಿದ್ದೆ, ಕಾರಣ ಅವರು ನನಗಿಂತ ಹಿರಿಯರು ಹಾಗೂ ಅನುಭವಿಯಾಗಿದ್ದರು. ಹೀಗಾಗಿ ಕಿರಿಯ ಬಸವರಾಜ್ ಬೊಮ್ಮಾಯಿ ಸಂಪುಟ ಸೇರಲು ಮುಜುಗರವಾಗುತ್ತಿದೆ ಅದಕ್ಕೆ ದೂರವುಳಿಯಲು ನಿರ್ಧರಿಸಿದ್ದೇನೆ '' ಎಂದು ಶೆಟ್ಟರ್ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.
ಆದರೆ ಶೆಟ್ಟರ್ ಅವರ ಈ ಕಾರಣವನ್ನು ಒಪ್ಪುವುದು ಸ್ವಲ್ಪ ಕಷ್ಟ. ಏಕೆ, ಕ್ರಿಕೆಟ್ ನಾಯಕರಾಗಿದ್ದ ಸಚಿನ್ ತೆಂಡೂಲ್ಕರ್, ಮಹೇಂದ್ರಸಿಂಗ್ ಧೋನಿ ಕಿರಿಯ ಆಟಗಾರರ ನಾಯಕತ್ವದಲ್ಲಿ ಆಡಿ ತಮ್ಮ ಸಾಮರ್ಥ್ಯ ತೋರಿಸಿರಲಿಲ್ಲವೆ? ತಮ್ಮ ಅನುಭವ ಧಾರೆ ಎರೆದಿಲ್ಲವೆ?
ಬೊಮ್ಮಾಯಿ ಕಿರಿಯರಾಗಿರಬಹುದು, ರಾಜಕೀಯದಲ್ಲಿ ಸಾಕಷ್ಟು ಪಳಗಿದವರು. ನಿಮ್ಮಂಥ ಹಿರಿಯ ಹಾಗೂ ಅನುಭವಿಗಳು ಸಂಪುಟದಲ್ಲಿದ್ದರೆ ಅವರ ಮನೋಬಲ ಇನ್ನಷ್ಟು ಹೆಚ್ಚುವುದಿಲ್ಲವೆ? ಒಳಗಿದ್ದುಕೊಂಡೇ ಮಾರ್ಗದರ್ಶನ ನೀಡಬಹುದಿತ್ತಲ್ಲವೆ? ನಿಮ್ಮಂಥವರು ಸೀನಿಯಾರಿಟಿ ಕಾಂಪ್ಲೆಕ್ಸ್ ಬೆಳೆಸಿಕೊಳ್ಳುವುದು ಸರಿಯಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಕೆಲವು ಹಿರಿಯರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ತಥಾಕತಿಥ್ ಆಡಿಯೋ ಬಾಂಬ್ ದಲ್ಲಿಯ, ಬಿಎಸ್ವೈ ವಿಕೆಟ್ ಬೀಳುತ್ತೆ ಎಂಬ ಒಂದು ಮಾತು ಸತ್ಯವಾಗಿದೆ. ಹಾಗಾದರೆ ಇನ್ನೂ ಇಬ್ಬರು ಹಿರಿಯ ಸಚಿವರ ತಲೆದಂಡವಾಗುತ್ತೆ ಎಂಬ ಮಾತೂ ಸತ್ಯವಾಗಬಹುದಲ್ಲವೆ? ಹಿರಿಯರೆಂದರೆ ಇನ್ಯಾರು, ಶೆಟ್ಟರ್ ಹಾಗೂ ಈಶ್ವರಪ್ಪ.
ಈ ಸುಳಿವನ್ನು ಅರಿತೇ ಶೆಟ್ಟರ್ ಹಿಂದಕ್ಕೆ ಸರಿದಿದ್ದಾರೆ ಎಂಬ ಚರ್ಚೆ ನಡೆದಿದೆ. ಇದು ಸತ್ಯ ಇದ್ದರೂ ಇರಬಹುದು.
ಪಕ್ಷದ ಅಧ್ಯಕ್ಷರಾಗಿ, ಸಭಾಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕರಾಗಿ, ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಿರಿಯರಿಗೆ ಅವಕಾಶ ದೊರೆಯಲಿ ಎಂಬ ದೊಡ್ಡಗುಣವೂ ಅವರದಾಗಿರಬಹುದು. ಪುತ್ರ ಸಂಕಲ್ಪ ಶೆಟ್ಟರ್ ನಿಧಾನವಾಗಿ ರಾಜಕಾರಣದತ್ತ ಮುಖ ಮಾಡಿರುವುದು ಗಮನಾರ್ಹ.
ಆದರೆ, ಏಕೋ ಕ್ಷೇತ್ರದ ಮತದಾರರು ಶೆಟ್ಟರ್ ಬಗ್ಗೆ ನಿರಾಸೆಗೊಂಡಿದ್ದಾರೆ. ಕಾರಣ, ಕ್ಷೇತ್ರಕ್ಕೆ ಉತ್ತಮ ರಸ್ತೆ ಸಮರ್ಪಕ ಕುಡಿಯುವ ನೀರು ಸೇರಿದಂತ ಇನ್ನೂ ಅನೇಕ ಮೂಲಕ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂಬುದಕ್ಕೆ.
ಬಿಆರ್ಟಿಎಸ್ ಯೋಜನೆ ಮುಗಿಯಲು 10 ವರ್ಷಗಳೇ ಬೇಕಾಯಿತು. ಆ ಹತ್ತು ವರ್ಷ ಸಾರ್ವಜನಿಕರು ಅನುಭವಿಸಿದ ಕಷ್ಟ ನಷ್ಟ ಅಷ್ಟಿಷ್ಟಲ್ಲ. ಎಲ್ಲ ವಾರ್ಡುಗಳಿಗೆ ವಾರಕ್ಕೊಂದು ಬಾರಿಯೂ ಸರಿಯಾಗಿ ಕುಡಿವ ನೀರು ಪೂರೈಸಲು ಸಾಧ್ಯವಾದ ಪರಿಸ್ಥಿತಿಯಲ್ಲಿ 24 X 7 ನೀರು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈಗ ನಿಯಮಿತವಾಗಿ ಬರುವ ನೀರೂ ಬರುತ್ತಿಲ್ಲ. 24 X 7 ಗತಿ ದೇವರೇ ಬಲ್ಲ.
ಕೆಲವಡೆ ಸಿಮೆಂಟ್ ರೋಡ್ ಆದರೂ ಪೂರ್ತಿ ಕೆಲಸವಾಗಿಲ್ಲ. ಎಲ್ಲವೂ ಬೇಕಾಬಿಟ್ಟಿ. ಏಕೆ ಹೀಗಾಗಿದೆ ಎಂದು ಕೇಳುವವರು ಗತಿ ಇಲ್ಲ. ಇತರೆ ಒಳ ರಸ್ತೆ ಸಂಪೂರ್ಣ ಹಾಳಾಗಿವೆ. ಈಗ ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಯೋಜನೆ. ಇದು ಎಷ್ಟು ದಶಕ ತೆಗೆದುಕೊಳ್ಳುತ್ತೋ ಗೊತ್ತಿಲ್ಲ. ಶೆಟ್ಟರ್ ಮನೆ ಮುಂದೆ ಉತ್ತಮ ರಸ್ತೆ, ಪೇವರ್ಸ ಆದರೆ ಮುಗಿದು ಹೋಯಿತೆ? ಎಂದು ಜನ ಕೇಳುತ್ತಿದ್ದಾರೆ.
ಈ ಎಲ್ಲ ಯೋಜನೆಗಳು ಕುಂಟುತ್ತ ಸಾಗಿವೆ. ಅದರ ಜವಾಬ್ದಾರಿ ಶೆಟ್ಟರ್ ಅವರದೆ ಅಲ್ಲವೆ? ಹೀಗಾಗಿ ಕ್ಷೇತ್ರದ ಜನ ನೊಂದು ಬೆಂದು ಹೋಗಿದ್ದಾರೆ. ಇದು ಶೆಟ್ಟರ್ ಅವರ ವೈಫಲ್ಯ ಎಂದು ಮತದಾರರು ಹೇಳುವಲ್ಲಿ ಅರ್ಥವಿದೆ. ಈ ವೈಫಲ್ಯಗಳು ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು.
ಕೈಗಾರಿಕಾ ಸಚಿವರಾಗಿ ಅನೇಕ ಬೃಹತ್ ಉದ್ಯಮಗಳನ್ನು ಹುಬ್ಬಳ್ಳಿ ಧಾರವಾಡಕ್ಕೆ ತರಲು ಶ್ರಮಿಸಿದ್ದಾರೆ. ಆದರೆ ಅವುಗಳ ಸ್ಟೇಟಸ್ ಏನು ಎಂಬುದು ಗೊತ್ತಿಲ್ಲ. ಸಮರ್ಪಕ ವಿದ್ಯುತ್ ನೀರು ಹಾಗೂ ರಸ್ತೆ ಇಲ್ಲದ ಕಾರಣ ಉದ್ದಿಮೆಗಳು ಬರುತ್ತಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಅದೇ ರೀತಿ ಗೋಕುಲ್ ರಸ್ತೆಯಲ್ಲಿ ನಿರ್ಮಾಣವಾಗಿರುವ ಇನ್ಫೋಸಿಸ್ ಕಾರ್ಯಾರಂಭ ಮಾಡಿಲ್ಲ. ಅದಕ್ಕೆ ಕಾರಣಗಳೇನು ಎಂಬುದು ಶೆಟ್ಟರ್ ಅವರಿಗೆ ಗೊತ್ತಿರಬಹುದು. ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸಿ ಪ್ರತಿಷ್ಠಿತ ಇನ್ಫೋಸಿಸ್ ಪ್ರಾರಂಭಿಸಿದ್ದರೆ ಮಹಾನಗರದ ಗೌರವ ಹೆಚ್ಚುತ್ತಿರಲಿಲ್ಲವೆ? ಈ ವಿಷಯದಲ್ಲಿ ಶೆಟ್ಟರ್ ಏಕೆ ಮೌನ ವಹಿಸಿದ್ದಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
PublicNext
29/07/2021 01:53 pm