ಚಿತ್ರದುರ್ಗ: ರಾಜ್ಯದ 30 ನೇ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರೈತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ರೈತ ಮುಖಂಡ ಆರನಕಟ್ಟೆ ಶಿವಕುಮಾರ್ ಮಾತನಾಡಿ ಹಿರಿಯೂರು ತಾಲ್ಲೂಕಿಗೆ ಬರದ ಶಾಪವಿತ್ತು. ಇಂತಹ ಸಂದರ್ಭದಲ್ಲಿ ನೀರಿನ ಬವಣೆಯನ್ನು ನೀಗಿಸಿದ್ದು, ನೀರಿನ ಶಾಪ ವಿಮೋಚನೆ ತೊಡಗಿಸಿದ ಕೀರ್ತಿ ಬಸವರಾಜ್ ಬೊಮ್ಮಾಯಿಗೆ ಸೇರುತ್ತದೆ. ಹಿರಿಯೂರು ತಾಲ್ಲೂಕಿಗೆ ಹಾಗೂ ರೈತರೊಂದಿಗೆ ಅತ್ಯಂತ ಅವಿನಾಭಾವ ಸಂಬಂಧ ಬಸವರಾಜ್ ಬೊಮ್ಮಾಯಿಗೆ ಮಾತ್ರ ಇದೆ. ಹಿರಿಯೂರು ತಾಲ್ಲೂಕಿನ ಭಗೀರಥ ಎಂದರೆ ಬಸವರಾಜ್ ಬೊಮ್ಮಾಯಿ ಅವರು. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನೀರಾವರಿ ಕಡೆ ಗಮನ ಹರಿಸಿರಿಲ್ಲ. ಇಂತಹ ಸನ್ನಿವೇಶದಲ್ಲಿ 2008 ರಲ್ಲಿ 543 ದಿನ ವೇದಾ ಶಿವಕುಮಾರ್ ನೇತೃತ್ವದಲ್ಲಿ ಚಳುವಳಿ ನಡೆದ ಸಂದರ್ಭದಲ್ಲಿ ಬಲವಾಗಿ ಮಾತುಕತೆಗೆ ಬಂದಾಗ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ 5 ಟಿಎಂಸಿ ನೀರನ್ನು ನಾನು ಮಂಜೂರು ಮಾಡುವ ಜವಾಬ್ದಾರಿ ನನ್ನದು ಎಂದು ವಾಗ್ದಾನ ಮಾಡಿದ್ದರು.
ಅದರಂತೆ ಅವರು ಹದಿನೈದು ದಿನಗಳ ಒಳಗೆ ಕೊಟ್ಟ ಮಾತನ್ನು ಕೇಳಿಸಿಕೊಂಡು 5 ಟಿಎಂಸಿ ನೀರು ಬಿಡಬೇಕು ಎಂದು ಆದೇಶಿಸಿದ್ದರು. ಅವರು ಉತ್ತಮ ಆಡಳಿತ ನೀಡಲಿ, ಭಗವಂತ ಒಳ್ಳೆಯದು ಮಾಡಲಿ ಎಂದು ಸಾಮಸ್ತ ತಾಲೂಕಿನ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಇದರ ಜೊತೆಗೆ ನಗರದ ಉದಯ್ ಹೋಟೆಲ್ ಮುಂಭಾಗದಲ್ಲಿ ಬೊಮ್ಮಾಯಿ ಅಭಿಮಾನಿಗಳಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬ್ಯಾನರ್ ಭಾವಚಿತ್ರಕ್ಕೆ ಪುಷ್ಪ ಅಭಿಷೇಕ ಮಾಡಿದರು.
ಈ ಕಾರ್ಯಕ್ರಮದಲ್ಲಿ ವೇದಾ ಶಿವಕುಮಾರ್, ಹೆಚ್.ಆರ್. ತಿಮ್ಮಯ್ಯ, ಬಬ್ಬೂರು ಸುರೇಶ್, ಸಿದ್ದರಾಮಣ್ಣ, ಉದಯ್, ಸಿ. ನಾರಾಯಣಚಾರಿ, ಅಂಬರೀಷ್, ಆನಂದ್ ಶೆಟ್ಟಿ, ಶಿವಣ್ಣ ಬೀರೆನಹಳ್ಳಿ, ಎಂ.ಎಸ್. ರಾಘವೇಂದ್ರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
PublicNext
28/07/2021 04:58 pm