ಧಾರವಾಡ: ವಿಧಾನ ಪರಿಷತ್ ನಲ್ಲಿ ನಡೆಯುವ ಕಲಾಪಕ್ಕೆ ಮೊಬೈಲ್ ತರುವುದನ್ನು ನಿಷೇಧ ಮಾಡಲಾಗಿದೆ. ಬರುವ ಅಧಿವೇಶನದಿಂದಲೇ ಇದು ಕಾರ್ಯರೂಪಕ್ಕೆ ಬರುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ನ ಕಾರ್ಯ ಕಲಾಪಗಳಿಗೆ ಬರುವ ಸದಸ್ಯರ ಮೊಬೈಲ್ ಗಳನ್ನು ಪಡೆದು ಅವುಗಳನ್ನು ಲಾಕರ್ ನಲ್ಲಿಟ್ಟು ಅವರಿಗೆ ಕೀ ಕೊಡಲಾಗುವುದು. ನಂತರ ಹೊರ ಹೋಗುವಾಗ ಅವರು ತಮ್ಮ ಮೊಬೈಲ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಭಾಪತಿ ಹುದ್ದೆ ಒಂದ ಸಾಂವಿಧಾನಿಕ ಹುದ್ದೆ. ಯಾವುದೇ ಮಂತ್ರಿ ಹಾಗೂ ಶಾಸಕರನ್ನು ಕರೆದು ವಿಚಾರ ಮಾಡುವ ಅಧಿಕಾರ ಇರುತ್ತದೆ. ಈ ಅಧಿಕಾರವನ್ನು ಸದುಪಯೋಗ ಮಾಡಿಕೊಂಡು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.
ಖಾಸಗಿ ಅನುದಾನ ರಹಿತ ಶಾಲೆಗಳಿಗೆ 1990 ರಿಂದ 2000ರ ವರೆಗಿನ ಅನುದಾನ ಬಿಡುಗಡೆ ಮಾಡಲಾಗುವುದು ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದರಲ್ಲಿರುವ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಸರ್ಕಾರ ಯಾವುದೇ ಕಾರಣಕ್ಕೂ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಬರಬೇಕಾದ ಅನುದಾನವನ್ನು ತಡೆ ಹಿಡಿಯಬಾರದು. ಶಾಲಾ ಆಡಳಿತ ಮಂಡಳಿಯವರು ಕೂಡ ಯಾವುದೇ ಕಾರಣಕ್ಕೂ ಶಾಲೆಗಳನ್ನು ಬಂದ್ ಮಾಡಬಾರದು. ಇಬ್ಬರೂ ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಮುಂದಿನ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವಂತೆ ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ. ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಮಾಡುವಂತೆಯೂ ಸರ್ಕಾರದ ಗಮನಸೆಳೆಯುತ್ತೇನೆ ಎಂದರು.
PublicNext
01/03/2021 03:45 pm