ದಾವಣಗೆರೆ: ಪಂಚಮಸಾಲಿ, ಕುರುಬರು, ಒಕ್ಕಲಿಗರು, ಗೊಲ್ಲ ಸೇರಿದಂತೆ ಎಲ್ಲಾ ಸಮುದಾಯದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ರೆ ಈ ಸಮಸ್ಯೆಗೆ ಪರಿಹಾರ ಮೀಸಲಾತಿ ಒಂದೇ ಅಲ್ಲ. ಇದಕ್ಕೆ ಮೀಸಲಾತಿ ಅಪ್ರಸ್ತುತ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಪ್ರತಿಪಾದಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಲ್ಲಾ ಸಮುದಾಯಗಳು ಮೀಸಲಾತಿ ಸಿಕ್ಕರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಹಕಾರ ಆಗುತ್ತದೆ ಎಂಬ ಕಾರಣಕ್ಕೆ ಕೇಳುತ್ತಿವೆ ಅಷ್ಟೇ ಎಂದು ಹೇಳಿದರು.
ರೈತರು ಇಂದು ನ್ಯಾಯ ಬೇಡುತ್ತಿದ್ದಾರೆ. ಇಂತಹ ಸಮಯದಲ್ಲಿ ಈ ಕಾಯ್ದೆಗಳಿಂದ ರೈತರಿಗೆ ನ್ಯಾಯ ಸಿಗಲ್ಲ. ಈಗಾಗಲೇ ರೈತರು ಆರ್ಥಿಕವಾಗಿ ದಿವಾಳಿ ಆಗಿದ್ದಾರೆ. ಸದ್ಯ ಕೃಷಿ ವಲಯ ಬಿಕ್ಕಟ್ಟಿನಲ್ಲಿದೆ. ಇದರಿಂದ ರೈತರು ಕೂಲಿ ಕಾರ್ಮಿಕರಾಗಲಿದ್ದಾರೆ. ಸಾಮಾಜಿಕವಾಗಿಯೂ ರೈತರು ಸುರಕ್ಷಿತವಾಗಿಲ್ಲ. ಹಲವಾರು ಸಂಕಷ್ಟಗಳನ್ನ ರೈತರು ಎದುರಿಸುತ್ತಿದ್ದಾರೆ. ಹೀಗಾಗಿ ಕೇಂದ್ರದ ನೂತನ ಕೃಷಿ ಕಾಯ್ದೆ ಸಂವಿಧಾನ ವಿರೋಧಿಯಾಗಿವೆ. ಸದ್ಯ ವಿವಿಧ ಸಮುದಾಯಗಳು ಮೀಸಲಾತಿಗೆ ಬೇಡಿಕೆ ಇಟ್ಟಿವೆ. ರಾಜ್ಯದ ಎಲ್ಲ ಜಾತಿಯ ರೈತರು ಬಿಕ್ಕಟ್ಟಿನಲ್ಲಿದ್ದಾರೆ. ಹೀಗಾಗಿ, ಇಡೀ ದೇಶದಲ್ಲಿಯೇ ಮೀಸಲಾತಿ ಹೋರಾಟ ಶುರುವಾಗಿದೆ. ಇವರ ಸಮಸ್ಯೆಗೆ ಮೀಸಲಾತಿ ಪರಿಹಾರವಲ್ಲ ಎಂದು ಪ್ರತಿಪಾದಿಸಿದರು.
ಕೇಂದ್ರದ ಕೃಷಿ ಕಾಯ್ದೆಗಳ ತಿದ್ದುಪಡಿ ಬಗ್ಗೆ ಬೇಸರ ವ್ಯಕ್ತಪಡಿಸಿದ ನಾಗಮೋಹನದಾಸ್ ಅವರು, ಕೃಷಿ ಕಾನೂನು ಮಾಡುವ ಅಧಿಕಾರ ಕೇಂದ್ರಕ್ಕಿಲ್ಲ. ಆದರೆ, ರಾಜ್ಯದ ಅಧಿಕಾರ ಮೊಟಕುಗೊಳಿಸಿ ಕೇಂದ್ರ ಕಾಯ್ದೆ ಮಾಡಿದೆ. ಕೇಂದ್ರದ ಈ ನಡೆ ಒಕ್ಕೂಟ ವ್ಯವಸ್ಥೆಗೆ ಮಾರಕ. ಅಲ್ಲದೇ ರಾಜ್ಯಸಭೆಯಲ್ಕಿ ಸರ್ಕಾರಕ್ಕೆ ಬಹುಮತ ಕೂಡ ಇಲ್ಲ. ಆದರೂ ವಾಯ್ಸ್ ಓಟ್ ನಿಂದ ಕಾನೂನು ಪಾಸ್ ಮಾಡಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅಭಿಪ್ರಾಯಪಟ್ಟರು.
ಒಬ್ಬ ರಾಜ್ಯಸಭೆ ಸದಸ್ಯ ಮತಕ್ಕೆ ಹಾಕಲು ಕೇಳಿದರೆ ಹಾಕಬೇಕು. ಈ ಬಗ್ಗೆ ಎಲ್ಲಿಯೂ ಪರಿಪೂರ್ಣ ಚರ್ಚೆ ನಡೆಯಲೂ ಇಲ್ಲ. ಇದರಲ್ಲಿ ರೈತರನ್ನ ಸರ್ಕಾರ ವಿಶ್ವಾಸಕ್ಕೂ ತೆಗೆದು ಕೊಂಡಿಲ್ಲ. ಇವೆಲ್ಲ ಸಂವಿಧಾನ ವಿರೋಧಿ ಹಾಗೂ ಅಪ್ರಜಾಪ್ರಭುತ್ವದ ಪ್ರಕ್ರಿಯೆಗಳು ಎಂದು ತಿಳಿಸಿದರು.
PublicNext
21/02/2021 04:31 pm