ಮಂಗಳೂರು: ಶ್ರೀರಾಮನನ್ನು ವಿರೋಧಿಸುವವರು ರಾವಣನ ಪಕ್ಷದವರು. ಆದ್ದರಿಂದಲೇ ಕಾಂಗ್ರೆಸ್ ಕುಂಭಕರ್ಣನ ಹಂತದಲ್ಲಿದೆ ಎಂದು ಕೇಂದ್ರದ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಛೇಡಿಸಿದರು.
ಹಿಂದೆ ಲಂಕೆಯಲ್ಲಿಯೂ ವಿಭೀಷಣ ಎಂಬವನೊಬ್ಬನಿದ್ದ. ಅವನು ಏನು ಮಾಡಿದ್ದ ಎಂದು ಎಲ್ಲರಿಗೂ ತಿಳಿದೇ ಇದೆ. ಆದ್ದರಿಂದ ಕಾಂಗ್ರೆಸ್ ಸ್ವಲ್ಪ ಅರ್ಥಮಾಡಿಕೊಂಡು ತಮ್ಮ ಕೆಲಸ ಮಾಡಿಕೊಳ್ಳಲಿ. ಬರೀ ಟೀಕೆ, ಪ್ರಹಾರ, ಮೇಜು ಗುದ್ದುವುದರಿಂದ ಯಾವ ಸಾಮಾಜಿಕ ಸಮಸ್ಯೆಯೂ ಪರಿಹಾರ ಆಗುವುದಿಲ್ಲ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಅನುಷ್ಠಾನಕ್ಕೆ ತರುವಲ್ಲಿ ಬಿಜೆಪಿ ಅತ್ಯಂತ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಯಾರೊಂದಿಗೂ ವೈಷಮ್ಯ ಇಟ್ಟುಕೊಂಡಿಲ್ಲ, ದೇಶದಲ್ಲಿ ಎಲ್ಲಿಯೂ ಕಲ್ಲು ತೂರಾಟ ನಡೆದಿಲ್ಲ. ನರೇಂದ್ರ ಮೋದಿಯವರು ಈ ಬಗ್ಗೆ ಎಲ್ಲಿಯೂ ಗೊಂದಲ ನಿರ್ಮಾಣವಾಗದಂತೆ ಸಮಂಜಸವಾಗಿ ಕೊಂಡೊಯ್ಯುತ್ತಿದ್ದಾರೆ. ನಾವೇನು ಹಿಂದೂಗಳೆಂದು ರಾಮನ ಆರಾಧನೆ ಮಾಡುತ್ತಿಲ್ಲ. ಈ ದೇಶದ ಆದರ್ಶ ಪುರುಷ ರಾಮನೆಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ನಮ್ಮ ವಿರೋಧಿಗಳೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಕೆಲಸ ಮಾಡುತ್ತಿದ್ದೇವೆ. ಶ್ರೀರಾಮಮಂದಿರ ನಿರ್ಮಾಣದಿಂದ ರಾಜಕೀಯ ವ್ಯತ್ಯಾಸಗಳಾಗಬಹುದು ಎಂದು ವಿರೋಧಿಗಳು ತಿಳಿದುಕೊಂಡಿದ್ದಾರೆ. ಆದರೆ ಆ ತರಹ ಏನೂ ಆಗೋದಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸುವವರು ಬಂದು ಇದರೊಂದಿಗೆ ಕೈಜೋಡಿಸಿದಲ್ಲಿ ರಾಮನ ಆಶೀರ್ವಾದ ದೊರಕಬಹುದು ಎಂದು ಸದಾನಂದ ಗೌಡ ಹೇಳಿದರು.
PublicNext
20/02/2021 12:38 pm