ಈಗಾಗಲೇ ಎರಡು ಬಾರಿ ರಾಜ್ಯದ ಸಚಿವರ ಖಾತೆ ಅದಲು-ಬದಲು ಮಾಡಲಾಗಿತ್ತು ಸದ್ಯ ಮತ್ತೆ ಅದಲು ಬದಲು ಕಾರ್ಯ ಚುರುಕಾಗಿದೆ. ಸರ್ಕಾರದ ಈ ಮಂಗನಾಟ ನೋಡಿ ಜನ ಲೇವಡಿ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದ ಜನ ತತ್ತರಿಸಿ ಹೋಗಿದ್ದಾರೆ ಮಾಡಬೇಕಾದ ಅನೇಕ ಕಾರ್ಯಗಳು ಸ್ತಬ್ಧವಾಗಿ ನಿಂತಿವೆ.
ಇದರ ನಡುವೆ ಖಾತೆ ಸಂಚಿಕೆಯ ದೊಂಬರಾಟ ಕಂಡ ಜನ ಕಾಮಿಡಿ ಸರ್ಕಾರ ಎಂದು ವ್ಯಂಗ್ಯವಾಡುತ್ತಿದ್ದಾರೆ. ಸುಧಾಕರ್, ಆನಂದ್ ಸಿಂಗ್, ಮಾಧುಸ್ವಾಮಿ ಖಾತೆ ಬದಲಾವಣೆ ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ, ಸುಧಾಕರ್ ಅವರಿಗೆ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಮಾಧುಸ್ವಾಮಿ ಬಳಿಯಿದ್ದ ಹಜ್, ವಕ್ಫ್ ಖಾತೆಯನ್ನೂ ವಾಪಸ್ ಪಡೆಯಲು ನಿರ್ಧರಿಸಿದ್ದಲ್ಲದೆ, ಸಚಿವ ಆನಂದ್ ಸಿಂಗ್ ರಿಂದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಹಿಂಪಡೆಯುವ ಬಗ್ಗೆ ಯೋಚಿಸಿದ್ದಾರೆ. ಹಾಗೇ ಆನಂದ್ ಸಿಂಗ್ಗೆ ಹಜ್, ವಕ್ಫ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲು ನಿರ್ಧರಿಸಿದ್ದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಸಂಜೆ ಅಧಿಕೃತವಾಗಿ ಆದೇಶ ಹೊರಬೀಳಲಿದೆ.
ಇನ್ನು ಈ ಬಗ್ಗೆ ನನಗೆ ಮಾಹಿತಿ ಇಲ್ಲವೆಂದು ಸಚಿವ ಮಾಧುಸ್ವಾಮಿ ಹೇಳಿದ್ದರೆ, ಇನ್ನೊಂದೆಡೆ ಆನಂದ್ ಸಿಂಗ್, ನಾನು ಸಿಎಂ ಭೇಟಿ ಮಾಡುತ್ತೇನೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದೂ ಹೇಳಿಕೆ ನೀಡಿದ್ದಾರೆ.
PublicNext
25/01/2021 11:33 am