ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ವಿಧಾನ ಸಭೆ ಚುನಾವಣೆ ಇನ್ನೂ ಎರಡು ವರ್ಷಗಳಿರುವಾಗಲೇ ಕಾಂಗ್ರೆಸ್ ತಾಲೀಮು ಆರಂಭಿಸಿದೆ. ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ಮೋದಿಯನ್ನು ಎದುರಿಸುವಲ್ಲಿ ಸೋತು ಬಸವಳಿದಿರುವ ಪಕ್ಷವನ್ನು ರಾಜ್ಯ ಮಟ್ಟದಲ್ಲಾದರೂ ಸಂಘಟಿಸಬೇಕು, ಬಿಜೆಪಿಗೆ ಪರ್ಯಾಯವಾಗಿ ಎದ್ದು ನಿಲ್ಲಬೇಕೆಂಬುದೇ ಕಾಂಗ್ರೆಸ್ ಸಂಕಲ್ಪ ಸಮಾವೇಶದ ಉದ್ದೇಶ.
ವಿಶೇಷವಾಗಿ ಧಾರವಾಡ ಜಿಲ್ಲೆಯಲ್ಲಿ ಏನೆ ಸಮಾವೇಶ ನಡೆದರೂ ಮುಂಚೂಣಿಯಲ್ಲಿರುವವರು ಮಾಜಿ ಸಚಿವ ವಿನಯ ಕುಲಕರ್ಣಿ. ಆದರೆ ಅವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದೆ ಬೆಳಗಾವಿ ಹಿಂಡಲಗಾ ಜೈಲು ಸೇರಿರುವುದು ಒಂದು ರೀತಿಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ.
ಆಂತರಿಕ ಭಿನ್ನಾಭಿಪ್ರಾಯ, ಒಣ ಜಂಬ, ಓಲೈಕೆ ರಾಜಕಾರಣ, ಪುಗ್ಸಟ್ಟೆ ಯೋಜನೆಗಳನ್ನು ಪರಾಮರ್ಶಿಸಿದರೆ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಲ್ಲಬಲ್ಲದು. ಕಾಂಗ್ರೆಸ್ಸಿನಲ್ಲಿ ನಾಯಕರಿಗೇನೂ ಕೊರತೆ ಇಲ್ಲ ಆದರೆ ನಾಯಕತ್ವದ ಆಭಾವವಿದೆ. ಎತ್ತು ಏರಿಗೆಳೆದರೆ ಕೋಣೆ ಕೆರೆಗೆ ಎಳೆಯಿತು ಎಂಬಂತೆ ಮನಸೋ ಇಚ್ಛೆ ಹೇಳಿಕೆ ನೀಡುವ ಮೂಲಕ ಪಕ್ಷವನ್ನು ಮುಜುಗರಕ್ಕೀಡು ಮಾಡುವವರಿಗೇನೂ ಕೊರತೆ ಇಲ್ಲ.
ಪಕ್ಷ ಇಂದು ಎಲ್ಲ ಸಮುದಾಯಗಳ ಪಕ್ಷವಾಗಿ ಉಳಿದಿಲ್ಲ. ಕೇವಲ ಒಂದು ಸಮುದಾಯ ಸಮಾಜವನ್ನು ಓಲೈಸುತ್ತ ಇನ್ನುಳಿದ ಬಲಿಷ್ಠ ಸಮುದಾಯವನ್ನು ದೂರವಿಟ್ಟು ರಾಜಕಾರಣ ಮಾಡಲು ಹೊರಟಿರುವುದು ಪಕ್ಷದ ದಯನೀಯ ಸ್ಥಿತಿಗೆ ಕಾರಣವಾಗಿದೆ.
ರಾಷ್ಟ್ರ ಮಟ್ಟದಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇನ್ನಿತರ ನಾಯಕರ ಪ್ರಭಾವಳಿ ಇರಬಹುದು, ಅವರಿಂದ ಹೆಚ್ಚಿನ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಹಿರಿಯ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಎಚ್ . ಕೆ ಪಾಟೀಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಭವವೇನೂ ಕಡಿಮೆ ಇಲ್ಲ. ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ಈ ಎಲ್ಲ ಧೀಮಂತ ನಾಯಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಪಕ್ಷವನ್ನು ಮುನ್ನಡೆಸಿದರೆ ಬಿಜೆಪಿಯ ಟಕ್ಕರ್ ಕೊಡುವುದು ಅಸಾಧ್ಯವೇನಿಲ್ಲ.
ಕೇವಲ ಬಿಜೆಪಿ, ಆರ್ ಎಸ್ ಎಸ್, ಮೋದಿಯನ್ನು ನಿತ್ಯ ಟೀಕಿಸುವುದು ಸಾಧನೆಯಲ್ಲ ಎಂಬುದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ಸರಕಾರ ಬಹುತೇಕ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಕೊರೊನಾ ನಿರ್ವಹಣೆ ಸೇರಿದಂತೆ ಇತ್ತೀಚೆಗಗೆ ನಡೆದ ಸಾರಿಗೆ ನೌಕರರ ಮುಷ್ಕರ ನಿರ್ವಹಣೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುವಲ್ಲಿ ಸೋತಿದೆ. ವಲಸೆ ಬಂದಿರುವ ಶಾಸಕರಿಗೆ ಮಂತ್ರಿ ಕುರ್ಚಿ ಕೊಡಿಸುವುದು, ಅವರನ್ನು ಓಲೈಸುವುದರಲ್ಲಿಯೇ ಸಮಯ ಕಳೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತು.
ಜನರಿಗೆ ಹತ್ತಿರವಾಗಿರುವ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಡುವಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿಫಲವಾಗಿದೆ.
ಬೇಕಾದರೆ ನೋಡಿ... ಇಂದಿನ ಸಂಕಲ್ಪ ಸಮಾವೇಶ ಕೇವಲ ಆರ್ ಎಸ್ ಎಸ್ , ಮೋದಿಯನ್ನು ಟೀಕಿಸಿ ಚಪ್ಪಾಳೆ ತಟ್ಟಿಸಿಕೊಳ್ಳಲು ಸೀಮಿತವಾಗುತ್ತದೆ. ಬಿಜೆಪಿ ವಿರುದ್ಧ ನಡೆಸುವ ಹೋರಾಟಕ್ಕೆ ಗಟ್ಟಿ ವಿಷಯಗಳನ್ನು ಕಾರ್ಯಕರ್ತರಿಗೆ ನೀಡುವ ಪ್ರಯತ್ನವಾಗುವುದಿಲ್ಲ. ಎಲ್ಲ ನಾಯಕರು ಕಾಂಪಿಟೇಶನ್ ಮೇಲೆ ಮೋದಿ ಮೇಲೆ ಮುಗಿ ಬೀಳುತ್ತಾರೆ. ಏಕ ವಚನದಲ್ಲಿ ಟೀಕಿಸುತ್ತಾರೆ. ಇದು ಪಕ್ಷಕ್ಕೆ ಮತ್ತಷ್ಟು ಹಾನಿಯುಂಟು ಮಾಡುವ ಸಾಧ್ಯತೆಗಳಿವೆ.
ರಾಜ್ಯ ಸರಕಾರದ ವೈಫಲ್ಯಗಳಿಗೆ ಕನ್ನಡಿ ಹಿಡಿಯಿರಿ, ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಅರಿಯಿರಿ, ವಿವಾದಾತ್ಮಕ ಹೇಳಿಕೆಗಳಿಂದ ದೂರವಿರಿ, ಈಗಲೇ ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಡಬೇಡಿ, ಯಾವುದೇ ಸಮುದಾಯದ ನಂಬಿಕೆಗಳನ್ನು ಘಾಸಿಗೊಳಿಸಬೇಡಿ ಎಂಬುದು ಹಿರಿಯ ಕಾಂಗ್ರೆಸ್ಸಿಗರ ಕಳಕಳಿಯ ಸಲಹೆ.
PublicNext
11/01/2021 11:16 am