ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೈತರ ಖಾತೆಗೆ 2 ಸಾವಿರ ದುಡ್ಡು ಹಾಕಿದರೆ ಬಿಜೆಪಿ ನಾಯಕರು, ಮುಖಂಡರು ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ನಾನು ಲಕ್ಷ ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೆ. ಅದರ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.
ನಗರದಲ್ಲಿ ನಡೆದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಎಷ್ಟು ಹಣ ಇದೆ ಅಂತಾ ಗೊತ್ತು. ಆದರೆ 600 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಾರೆ. ಈಗ ಹೋಗಿ ಗುದ್ದಲಿ ಪೂಜೆ ಮಾಡಿದ್ದಾರೆ. ಈ ಹಿಂದೆ ಶಾಸಕರಿಗೆ 25 ಕೋಟಿ ರೂ. ಅನುದಾನ ಕೊಡುತ್ತೇವೆ ಅಂತ ಹೇಳಿದ್ದರು. ಕೆಲ ದಿನಗಳ ನಂತರ 50 ಲಕ್ಷ ರೂ. ಕೊಡ್ತೀನಿ ಎನ್ನುತ್ತಾರೆ. ಹೀಗೆ ಇರುವಾಗ ಅನುಭವ ಮಂಟಪಕ್ಕೆ ಹಣ ಎಲ್ಲಿಂದ ತರುತ್ತಾರೆ ಎಂದು ಕುಟುಕಿದರು.
ಬಿಜೆಪಿ ಜೊತೆಗೆ ಯಾವುದೇ ರೀತಿ ಒಪ್ಪಂದವೂ ಇಲ್ಲ, ವಿಲೀನವೂ ಇಲ್ಲ. ಈ ಸಂದೇಶ ಇಡೀ ರಾಜ್ಯಕ್ಕೆ ಹೋಗಬೇಕು. ನಾವು ಸಿಎಂ ಯಡಿಯೂರಪ್ಪ, ಬಿಜೆಪಿ ಬಗ್ಗೆಯೂ ಸಾಫ್ಟ್ ಕಾರ್ನರ್ ಹೊಂದಿಲ್ಲ. ಸುಮ್ಮನೇ ಈ ಸುದ್ದಿಯನ್ನು ಹಬ್ಬಿಸಿಕೊಂಡು ಹೋಗುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
PublicNext
07/01/2021 05:25 pm