ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಹತ್ಯೆ ನಿಷೇಧ ಎಡಬಿಡಂಗಿ ಕಾನೂನು ಎಂದ ಸಿದ್ದರಾಮಯ್ಯ

ಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಈಗ ಮತ್ತೆ ಅದೇ ವಿಚಾರವಾಗಿ ಸರ್ಕಾರಕ್ಕೆ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದು, ಕೆಲವು ಚರ್ಚಾಸ್ಪದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅದು ಈ ಕೆಳಗಿನಂತಿದೆ.

ವಿಧಾನಮಂಡಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆಯನ್ನೇ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಸರ್ಕಾರದ ಹೇಡಿತನವನ್ನು ತೋರಿಸುತ್ತದೆ. ಚರ್ಚೆ ಮಾಡಿದರೆ ಈ ಮಸೂದೆಯ ಹಿಂದಿನ ದುರುದ್ದೇಶಗಳು ಅನಾವರಣಗೊಂಡು ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ ಬಿಜೆಪಿಗೆ.

ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಬೇಕು ಮತ್ತು ಗೋರಕ್ಷಣೆಯ ಹೆಸರಲ್ಲಿ ಪುಂಡಾಟಿಕೆ ನಡೆಸುವವರಿಗೆ ರಕ್ಷಣೆ ಕೊಡಬೇಕು ಎಂಬ ಎರಡು ದುರುದ್ದೇಶಗಳನ್ನು ಬಿಟ್ಟರೆ ಗೋಹತ್ಯೆ ನಿಷೇಧ ಮಸೂದೆಗೆ ಗೋವಿನ ಬಗ್ಗೆ ಭಕ್ತಿಯಾಗಲಿ, ಕಾಳಜಿಯಾಗಲಿ ಇಲ್ಲ.

ಗೋಹತ್ಯೆಗೆ ನಿಷೇಧವಂತೆ, ಗೋಮಾಂಸ ಮಾರಾಟ ಮತ್ತು ಸೇವನೆಗೆ ನಿರ್ಬಂಧ ಇಲ್ಲವಂತೆ. ಇಂತಹದ್ದೊಂದು ಎಡಬಿಡಂಗಿ ಕಾನೂನು ಮಾಡಲು ಇಷ್ಟೆಲ್ಲ ನಾಟಕ ಮಾಡಬೇಕೇ? ಮುಖ್ಯಮಂತ್ರಿ ಯಡಿಯೂರಪ್ಪನವರೇ, ಮಾರಾಟ ಮಾಡಲು ಗೋಮಾಂಸವನ್ನು ಆಮದು ಮಾಡಿಕೊಳ್ತಿರಾ?

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದಾಗಿ ರೈತರು ಮಾತ್ರ ಅಲ್ಲ, ಚರ್ಮದ ಉತ್ಪನ್ನಗಳ ತಯಾರಿಕೆಗೆ ಚರ್ಮದ ಕೊರತೆ ಎದುರಾಗಲಿದ್ದು, ಉತ್ಪಾದನೆ ಕುಂಠಿತಗೊಳ್ಳಲಿದೆ. ಇದರಿಂದ ನೇರವಾಗಿ ಮತ್ತು ಪರೋಕ್ಷವಾಗಿ ಈ ಕಸುಬನ್ನು ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಲಿವೆ.

ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂದೆಲ್ಲ ಹೇಳುವವರು ಕನಿಷ್ಠ ದೇಶಕ್ಕೆಲ್ಲ ಅನ್ವಯವಾಗುವಂತಹ ಸಮಾನ ಗೋಹತ್ಯೆ ನಿಷೇಧ ಕಾನೂನು ತರಬಾರದೇಕೆ? ನಿಮಗೆ ತಾಕತ್ತಿದ್ದರೆ ಬಿಜೆಪಿ ಆಡಳಿತ ಇರುವ ಗೋವಾ, ಈಶಾನ್ಯ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತನ್ನಿ. ಗೋಮಾಂಸ ರಫ್ತುಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ.

ವಯಸ್ಸಾದ ಹಸುಗಳ ಪಾಲನೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ಹೊರಲಿದೆ ಎಂದು ಹೇಳಿದ್ದೀರಿ. ರಾಜ್ಯದಲ್ಲಿ ಸರ್ಕಾರ ನಡೆಸುವ ಎಷ್ಟು ಗೋಶಾಲೆಗಳಿವೆ? ಎಷ್ಟು ಹೊಸ ಗೋಶಾಲೆಗಳನ್ನು ತೆರೆಯಲಿದ್ದೀರಿ? ಇದಕ್ಕಾಗಿ ಎಷ್ಟು ಹಣ ಒದಗಿಸಿದ್ದೀರಿ? ಈ ವಿವರಗಳನ್ನು ಮೊದಲು ಬಹಿರಂಗಪಡಿಸಿ.

Edited By : Nagaraj Tulugeri
PublicNext

PublicNext

31/12/2020 05:05 pm

Cinque Terre

94.67 K

Cinque Terre

24