ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅವರ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜನವರಿ.4 ಮತ್ತು 5 ರಂದು ಬೆಂಗಳೂರಿನಲ್ಲಿ ವಿಭಾಗವಾರು ಶಾಸಕರ ಸಭೆ ಕರೆದಿದ್ದಾರೆ. ಆದರೆ ಈ ಸಭೆಯ ವಿಚಾರವನ್ನು ಮುಂದಿಟ್ಟುಕೊಂಡು ಶಾಸಕ ಯತ್ನಾಳ್ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಜನವರಿ 4 ಮತ್ತು 5ರಂದು ವಿಭಾಗವಾರು ಶಾಸಕರ ಬದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಈ ಹಿಂದಿನ ವಿಭಾಗವಾರು ಸಭೆಗಳು ವಿಫಲವಾಗಿವೆ. ಈ ಮೊದಲು ವಿಭಾಗವಾರು ಶಾಸಕರ ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಮನವಿ ಸಲ್ಲಿಸಲಾಗಿತ್ತು. ಸಿಎಂ ತಕ್ಷಣ ಹಣ ಬಿಡುಗಡೆ ಮಾಡಿ ಎಂದು ಷರಾ ಬರೆದಿದ್ದರು. ಆದರೆ ಈವರೆಗೂ ಹಣ ಬಿಡುಗಡೆಯಾಗಿಲ್ಲ.
ಈ ಹಿಂದೆ ನಡೆದ ವಿಭಾಗವಾರು ಶಾಸಕರ ಸಭೆಯಿಂದಾಗಿ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಶಾಸಕರ ಮನಸ್ಸಿಗೆ ನೋವಾಗಿದೆ. ಉದಾಹರಣೆಗೆ ನನ್ನ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಶಾಸಕರು ಸಿಎಂ ಭೇಟಿಗೆ ಹೋದರೂ ಮುಖ್ಯಮಂತ್ರಿಗಳು ಸಿಗುತ್ತಿಲ್ಲ. ಬಹುಷಃ ಸಿಎಂ ಅನಾರೋಗ್ಯದ ದೃಷ್ಠಿಯಿಂದ ಸಿಗುತ್ತಿಲ್ಲ ಎಂದು ಭಾವಿಸುತ್ತೇನೆ.
ಇತ್ತೀಚೆಗೆ ನಡೆದ ನಾನಾ ನಿಗಮ ಮತ್ತು ಮಂಡಳಿಗಳಿಗೆ, ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅಲ್ಲದೇ, ಹಲವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈ ವಿಚಾರದಲ್ಲಿಯೂ ಬಿಜೆಪಿ ಶಾಸಕರನ್ನು ಕಡೆಗಣನೆ ಮಾಡಲಾಗಿದೆ. ಇದರಿಂದ ಕಾರ್ಯಕರ್ತರಿಗೂ ನೋವಾಗಿದೆ.
PublicNext
31/12/2020 01:53 pm