ದಾವಣಗೆರೆ: ಹಿಜಾಬ್ ವಿಚಾರದಲ್ಲಿ ಗಲಾಟೆ ಆಗುತ್ತಿರುವ ವಿಚಾರ ಕೇಳಿದರೆ ನಾಚಿಕೆ ಆಗುತ್ತೆ. ಧರ್ಮವನ್ನು ಮನೆಗಳು, ದೇವಸ್ಥಾನ, ಚರ್ಚ್ ಗಳಲ್ಲಿ ಮಾಡಲಿ. ಶಾಲೆಗಳಲ್ಲಿ ಧರ್ಮ ತಂದು ರಾಜಕಾರಣ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಸ್ಲಿಂರು, ಕ್ರಿಶ್ಚಿಯನ್ನರು ಹೀಗೆ ನಡೆದುಕೊಳ್ಳುತ್ತೇವೆ ಎಂದರೆ ಹೇಗೆ? ಸಮವಸ್ತ್ರ ಮಾಡಿರುವುದು ಶಿಸ್ತು ಕಾಪಾಡಲು. ಶಾಲೆ ಒಳಗಡೆ ಬಂದಾಗ ನಾನು ಮುಸ್ಲಿಂ, ನಾನು ಹಿಂದೂ, ಕ್ರಿಶ್ಚಿಯನ್ ಎಂಬ ಬೇಧಭಾವ ಬೇಕಾ? ವಿದ್ಯಾರ್ಥಿಗಳು ಶಿಕ್ಷಣ ಕಲಿಯಬೇಕು. ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ರೀತಿ ಇರಬೇಕು. ಹಿಜಾಬ್ ಹಾಕಿಕೊಂಡು ಬಂದಿದ್ದರೆ ಮುಸಲ್ಮಾನರು, ಖಾವಿ ಧರಿಸಿಕೊಂಡು ಬಂದರೆ ಹಿಂದೂಗಳು ಎಂದು ಗುರುತಿಸುವ ಪರಿಸ್ಥಿತಿ ಬರಬೇಕಾ? ಈ ಬೆಳವಣಿಗೆ ಸರಿಯಲ್ಲ ಎಂದರು.
ಕುಂದಾಪುರದ ಆರೇಳು ಮಕ್ಕಳು ಹಿಜಾಬ್ ವಿಚಾರದಲ್ಲಿ ಮಾಡಿದ ಗಲಾಟೆ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ. ಆ ಶಾಲೆಯಲ್ಲಿ 90 ಮಕ್ಕಳು ವರ್ಷಪೂರ್ತಿ ಸಮವಸ್ತ್ರ ಧರಿಸಿ ಬಂದಿದ್ದಾರೆ. ಆದ್ರೆ, ಆರೇಳು ವಿದ್ಯಾರ್ಥಿನಿಯರಿಗೆ ಆಗಲೇ ಬುದ್ದಿ ಕಲಿಸಿದ್ದರೆ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ. ಕಾಂಗ್ರೆಸ್ ನವರು ದುರುಪಯೋಗ ಮಾಡಿಕೊಂಡಿರುವುದು ಕಾಣುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದೂ ಮುಸ್ಲಿಂ ಬೇರೆಬೇರೆ ಮಾಡಿದ್ದರ ಪರಿಣಾಮ ಕಾಂಗ್ರೆಸ್ ದೇಶದಲ್ಲಿ ನಿರ್ನಾಮವಾಗಿದೆ ಎಂದು ಹೇಳಿದರು.
ಆಗ ಹಿಂದೂಸ್ತಾನ, ಪಾಕಿಸ್ತಾನ ಮಾಡಿದ್ದರ ಪರಿಣಾಮ ಈಗ ನಾವು ಇವೆಲ್ಲವನ್ನೂ ಎದುರಿಸುವಂತಾಗಿದೆ. ಹಿಂದೂಸ್ತಾನ ಅಂದರೆ ಪ್ರಶ್ನೆ ಕೇಳುವ ಪರಿಸ್ಥಿತಿ ಬಂದಿದೆ. ಸರಸ್ವತಿ ಪೂಜೆ ಮಾಡಬಹುದಾ ಎಂದು ಮುಸ್ಲಿಂ ವಿದ್ಯಾರ್ಥಿನಿ ಕೇಳುತ್ತಾಳೆ. ಆಕೆಗೆ ಇಷ್ಟೊಂದು ಧೈರ್ಯ ಬರಲು ಯಾರು ಕಾರಣ. ಪಾಕಿಸ್ತಾನದಲ್ಲಿ ಹೋಗಿ ಸರಸ್ವತಿ ಪೂಜೆ ಮಾಡಲು ಆಗುತ್ತಾ ಇವರ ಕೈಯಲ್ಲಿ. ಶಾಲೆಗಳಲ್ಲಿ ಸರಸ್ವತಿ ಪೂಜೆ ಮಾಡಬಾರದು ಎಂದು ಹೇಳಿದರೆ ಸಿಟ್ಟು ಯಾರಿಗೆ ಬರಲ್ಲ ಹೇಳಿ. ಒಟ್ಟಾಗಿರೋಣ ಎಂಬ ಭಾವನೆ ಕಾಂಗ್ರೆಸ್ ನವರಲ್ಲಿ ಕಂಡು ಬರುತ್ತಿಲ್ಲ. ಯಾಕೆ ಮುಸ್ಲಿಂರಿಗೆ ತೊಂದರೆ ಕೊಡುತ್ತೀರಾ ಅಂತಾ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಸಿ. ಎಂ. ಇಬ್ರಾಹಿಂ ಹೇಳುತ್ತಾರೆ. ಯಾಕೆ ಎಲ್ಲರೂ ಒಂದಾಗಿರೋಣ, ಒಟ್ಟಾಗಿರೋಣ ಎಂಬ ಮಾತು ಅವರ ಬಾಯಲ್ಲಿ ಬರಲ್ಲ ಹೇಳಿ. ಕಾಂಗ್ರೆಸ್ ನವರಿಗೆ ಇನ್ನು ಬುದ್ದಿ ಬಂದಿಲ್ಲ, ಇನ್ಯಾವಾಗ ಬರುತ್ತೋ ಎಂದು ಕಿಡಿಕಾರಿದರು.
PublicNext
07/02/2022 07:56 pm