ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯನ ಸ್ಥಾನ ಮುಸ್ಲಿಂ ಅಭ್ಯರ್ಥಿಗೆ ಮೀಸಲಿಡಬೇಕಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ತಪ್ಪು ಹೆಜ್ಜೆ ಇಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಇದೇ ರೀತಿ ಪದೇಪದೆ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ದರೆ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತೆ ಎಂದು ಮುಸ್ಲಿಂ ಧರ್ಮಗುರುಗಳು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕರೆಗಂಟೆ ಕೇಳಿಸಿದ್ದಾರೆ.
ರವಿವಾರ ನಗರದ ನಂದಿದುರ್ಗ ರಸ್ತೆಯ ಖಾದ್ರಿ ಮಸೀದಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಸ್ಲಿಂ ಧರ್ಮಗುರು ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ, ಮುಸ್ಲಿಂ ಸಮುದಾಯ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಅಲ್ಲ. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಬೆಂಬಲಿಸಿ ಮುಸ್ಲಿಂ ಸಮುದಾಯ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಪರ ನಿಲುವು ತಳೆದಿದೆ. ಆದ್ರೆ ಮುಸ್ಲಿಂ ಸಮುದಾಯದ ನಾಯಕರಿಗೆ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ನಾವು ಬೇರೆ ಪಕ್ಷಕ್ಕೆ ಬೆಂಬಲಿಸಬೇಕಾಗುತ್ತೆ ಎಂದು ಅಹ್ಮದ್ ಖಾಸ್ಮಿ ಎಚ್ಚರಿಸಿದ್ದಾರೆ.
PublicNext
31/01/2022 08:21 am