ಮೈಸೂರು: ಮೈಸೂರು ಮಹಾನಗರ ಪಾಲಿಕೆಯು ನಗರದ 92 ದೇವಾಲಯ ತೆರವಿಗೆ ಭರ್ಜರಿ ಸಿದ್ಧತೆ ನಡೆಸಿತ್ತು. ಆದರೆ ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಅಧಿಕೃತವಾಗಿ ತಡೆ ನೀಡುವ ಆದೇಶ ಜಾರಿ ಮಾಡುವ ಸಾಧ್ಯತೆಯಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಸಂಸದ ಪ್ರತಾಪ್, ಸಿಎಂ ಬೊಮ್ಮಾಯಿ ಅವರೇ ಖುದ್ದು ನನಗೆ ದೂರವಾಣಿ ಕರೆ ಮಾಡಿ "ದೇವಸ್ಥಾನಗಳ ರಕ್ಷಣೆಗೆ ನಾವು ಬದ್ಧ. ಸುಪ್ರೀಂಕೋರ್ಟ್ ಆದೇಶದಲ್ಲಿ ಎಲ್ಲೂ ಏಕಾಏಕಿ ದೇವಸ್ಥಾನ ತೆರವು ಮಾಡಿ ಎಂದು ಸೂಚಿಸಿಲ್ಲ. ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡಂತಿದೆ. ಹೀಗಾಗಿ, ತೆರವು ದಿನಾಂಕದ ಆದೇಶಕ್ಕೆ ಸದ್ಯಕ್ಕೆ ತಡೆ ನೀಡುವ ಆದೇಶ ಮಾಡುತ್ತೇನೆ" ಎಂದಿದ್ದಾರೆ ಎಂದರು.
ನ್ಯಾಯಾಲಯದ ಆದೇಶವನ್ನು ಗೌರವಿಸಿ ಅವರ ನಿರ್ದೇಶನದಂತೆ ದೇವಸ್ಥಾನವನ್ನು ಉಳಿಸಿಕೊಳ್ಳುವ ಒಂದು ವಿಧಾನವನ್ನು ಬಳಸಿಕೊಳ್ಳಲಾಗುವುದು. ಸಿಎಂ ಕಾನೂನು ತಜ್ಞರ ಸಲಹೆ ಪಡೆದು ಆದೇಶ ಮಾಡಲಿದ್ದಾರೆ. ಹೀಗಾಗಿ ದೇವಸ್ಥಾನ ತೆರವಾಗುತ್ತದೆ ಎಂಬ ನಮ್ಮ ಆತಂಕ ಸದ್ಯಕ್ಕೆ ನಿವಾರಣೆ ಆಗಿದೆ. ಮುಸ್ಲಿಂ ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ವಕ್ಫ್ ಬೋರ್ಡ್ ಇದೆ. ಇದೇ ಮಾದರಿಯಲ್ಲಿ ಹಿಂದೂ ದೇವಾಲಯಗಳ ರಕ್ಷಣೆಗೂ ಬೋರ್ಡ್ ಅವಶ್ಯಕತೆ ಇದೆ. ಇದನ್ನು ಸಿಎಂ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
PublicNext
13/09/2021 05:07 pm