ಲಕ್ನೋ: ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಸಂತ್ರಸ್ತೆ ಮಂಗಳವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಪ್ರಕರಣಗಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಮೃತ ಯುವತಿಯರ ಸಾವಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಲಾಗಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇಂದು ಹತ್ರಾಸ್ಗೆ ತೆರಳಿ ಮೃತ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಲು ಮುಂದಾದರು. ಆದರೆ ನೊಯ್ಡಾದಲ್ಲೇ ಅವರಿಬ್ಬರ ವಾಹನಗಳನ್ನೂ ಪೊಲೀಸರು ತಡೆದರು. ಹೀಗಾಗಿ ಅವರಿಬ್ಬರೂ ಕಾಲ್ನಡಿಗೆಯಲ್ಲೇ ಹತ್ರಾಸ್ಗೆ ತೆರಳಲು ಮುಂದಾದರು. ಈ ವೇಳೆ ಟ್ರಾಫಿಕ್ ಸಮಸ್ಯೆ ಉಂಟಾಗಿ, ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಗಳೂ ನಡೆದವು.
ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಲಾಠಿ ಚಾರ್ಜ್ ಕೂಡ ಮಾಡಲಾಯಿತು. ಅಲ್ಲದೆ, ಈ ವೇಳೆ ರಾಹುಲ್ ಗಾಂಧಿ ಅವರನ್ನೂ ತಳ್ಳಿ, ಲಾಠಿ ಚಾರ್ಜ್ ಮಾಡಲಾಯಿತು. ಈ ವೇಳೆ ರಾಹುಲ್ ಗಾಂಧಿ ನೆಲಕ್ಕುರುಳಿದರು. ತಕ್ಷಣೆ ಅವರ ಭದ್ರತಾ ಸಿಬ್ಬಂದಿ ಅವರನ್ನು ಮೇಲಕ್ಕೆತ್ತಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
PublicNext
01/10/2020 04:09 pm