ವಯನಾಡ್ (ಕೇರಳ): ಕಾಂಗ್ರೆಸ್ಸಿಗರೇ ಗಾಂಧಿಯವರ ಫೋಟೋ ಧ್ವಂಸಗೊಳಿಸಿರುವ ಘಟನೆ ಸಂಸದ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡಿನಲ್ಲಿ ನಡೆದಿದೆ.ಎರಡು ತಿಂಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು ಸದ್ಯ ಸತ್ಯಾಸತ್ಯತೆ ಹೊರಬಂದಿದ್ದು ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಆಪ್ತ ಸಹಾಯಕ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಇತ್ತೀಚೆಗೆ ಎಸ್ಎಫ್ ಐ ಕಾರ್ಯಕರ್ತರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿಲ್ಲ ಎನ್ನುವ ಕಾರಣಕ್ಕೆ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಶುರು ಮಾಡಿದ್ದರು.
ಇದಾದ ನಂತರ ಅಲ್ಲಿರುವ ಪೀಠೋಪಕರಣಗಳು ಧ್ವಂಸಗೊಂಡಿದ್ದವು, ಮಾತ್ರವಲ್ಲದೇ ಗಾಂಧಿಯವರ ಫೋಟೋ ಕೂಡ ಧ್ವಂಸಗೊಂಡಿತ್ತು. ಇದನ್ನು ಎಸ್ ಎಫ್ ಐ ಕಾರ್ಯಕರ್ತರೇ ಮಾಡಿರುವುದಾಗಿ ರಾಹುಲ್ ಗಾಂಧಿ ಆಪ್ತ ಸಹಾಯಕ ರತೀಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು
ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಸದ್ಯ ಸಿಸಿಟಿವಿ ಪರೀಕ್ಷೆ ಮಾಡಿದಾಗ ಸತ್ಯಾಂಶ ಬಯಲುಗೊಂಡಿದೆ. ಗಾಂಧಿ ಫೋಟೋ ಅನ್ನು ಖುದ್ದು ರಾಹುಲ್ ಗಾಂಧಿ ಆಪ್ತ ಸಹಾಯಕ ರತೀಶ್ ಕುಮಾರ್ ಸೇರಿದಂತೆ ಕಚೇರಿ ಸಿಬ್ಬಂದಿ ರಾಹುಲ್ ಎಸ್. ರವಿ, ಕಾಂಗ್ರೆಸ್ ಕಾರ್ಯಕರ್ತ ನೌಶಾದ್ ಮತ್ತು ಮುಜೀಬ್ ಧ್ವಂಸಗೊಳಿಸಿರುವುದು ತಿಳಿದುಬಂದಿದೆ.ಘಟನೆಗೆ ಸಂಬಂಧಿಸಿದಂತೆ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
PublicNext
20/08/2022 11:05 am