ನವದೆಹಲಿ: ಕೇಂದ್ರ ಸರ್ಕಾರ ಇಸ್ರೇಲ್ ನೊಂದಿಗೆ ಮಾಡಿಕೊಂಡ ಆಧುನಿಕ ಶಸ್ತ್ರಾಸ್ತ್ರಗಳ ಒಪ್ಪಂದದ ಭಾಗವಾಗಿ ಪೆಗಾಸಸ್ ಸ್ಪೈವೇರ್ ನ್ನು ಖರೀದಿ ಮಾಡಿತ್ತು ಎಂದು ನಿನ್ನೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ಬೆನ್ನಲ್ಲೇ, ಹಿರಿಯ ವಕೀಲರೊಬ್ಬರು ಪ್ರಧಾನಿ ವಿರುದ್ಧ ಎಫ್ ಐಆರ್ ದಾಖಲಿಸಲು ಒತ್ತಾಯಿಸಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.
ಹೌದು ಅರ್ಜಿದಾರ, ವಕೀಲ ಮನೋಹರ್ ಲಾಲ್ ಶರ್ಮಾ ಅವರು ಸುಪ್ರೀಂ ಮೆಟ್ಟಿಲೇರಿದ್ದಾರೆ.ಈ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಶರ್ಮಾ ಅವರು ಸಹ ಈ ಗುಂಪಿನಲ್ಲಿದ್ದಾರೆ. ‘ಪ್ರಧಾನಿ ವಿರುದ್ಧ ಎಫ್ಐಆರ್ ದಾಖಲಿಸಬೇಕು, ಈ ವಹಿವಾಟಿಗೆ ಸಂಬಂಧಿಸಿದ ಹಣವನ್ನು ವಸೂಲಿ ಮಾಡಬೇಕು ಹಾಗೂ ಮೋದಿ ಅವರನ್ನು ಶಿಕ್ಷೆಗೊಳಪಡಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪೆಗಾಸಸ್ ಸಂಬಂಧಿಸಿ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ 2021ರ ಅಕ್ಟೋಬರ್ 27ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಪ್ರಕರಣದ ತನಿಖೆಗೆ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಿದ್ದು, ತನಿಖೆಯ ಮೇಲ್ವಿಚಾರಣೆಗೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರನ್ನು ನೇಮಿಸಿತ್ತು.
ಯಾವುದಾದರೂ ಸರ್ಕಾರಿ ಇಲಾಖೆಯು ಪೆಗಾಸಸ್ ತಂತ್ರಾಂಶವನ್ನು ಯಾವುದೇ ನಾಗರಿಕನ ವಿರುದ್ಧ ಬಳಸಿದೆಯೇ? ಬಳಸಿದ್ದರೆ ಯಾವ ಕಾಯ್ದೆ, ನಿಯಮದಡಿ? ಕಾನೂನು ಪ್ರಕಾರ ಜಾರಿಗೊಳಿಸಿದೆಯೇ ಎಂದು ತಿಳಿಯಲೂ ಸಮಿತಿಗೆ ಸೂಚಿಸಿತ್ತು.
ಈಗ ಹೊಸದಾಗಿ ಅರ್ಜಿ ಸಲ್ಲಿಸಿರುವ ಶರ್ಮಾ, ‘ಭಾರತ ಸರ್ಕಾರವು ಪೆಗಾಸಸ್ ತಂತ್ರಾಂಶವನ್ನು ಇಸ್ರೇಲ್ನಿಂದ 2017ರಲ್ಲಿ ಕ್ಷಿಪಣಿ ವ್ಯವಸ್ಥೆ ಒಳಗೊಂಡ 2 ಶತಕೋಟಿ ಡಾಲರ್ ವಹಿವಾಟಿನ ಭಾಗವಾಗಿ ಖರೀದಿಸಿದೆ’ ಎಂಬ ವರದಿಯನ್ನು ಉಲ್ಲೇಖಿಸಿದ್ದಾರೆ.
PublicNext
30/01/2022 09:32 pm