ವರದಿ- ಸಂತೋಷ ಬಡಕಂಬಿ
ಬೆಳಗಾವಿ:ಕೇಂದ್ರ ಸರ್ಕಾರದ ಆಹಾರ ಧಾನ್ಯ ಹಾಗೂ ಬೇಳೆ ಕಾಳುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ಹೇರಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಬುಧವಾರ ಆಮ್ ಆದ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಲೆ ಏರಿಕೆ ನಡುವೆ ಕೆಂಗಟ್ಟಿರುವ ಜನರಿಗೆ ಅಗತ್ಯ ವಸ್ತುಗಳಾದ ಹಾಲು, ಮೊಸರಿನ ಮೇಲೆಯೂ ಸೇವಾ ತೆರಿಗೆ ಹೊರೆ ಹಾಕಿರುವುದನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ತೆರಿಗೆ ಹೆಚ್ಚಳದಿಂದ ಸಣ್ಣ ಮತ್ತು ಮಧ್ಯಮ ಅಂಗಡಿ ವ್ಯಾಪಾರಸ್ಥರಿಗೆ ಹೊರೆಯಾಗುತ್ತದೆ. ಅಲ್ಲದೆ, ಕೃಷಿ ಉತ್ಪನಗಳ ಮೇಲೆ ಹೆಚ್ಚು ಪರಿಣಾಮ ಬಿರಲಿದೆ. ಪ್ರಮುಖವಾಗಿ ಜನಸಾಮಾನ್ಯರ ಜೇಬಿಗೆ ಇದು ಕತ್ತರಿ ಬೀಳುತ್ತದೆ ಎಂದು ದೂರಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಆಹಾರ ಧಾನ್ಯಗಳು ಹಾಗೂ ಬೇಳೆಕಾಳು ವಹಿವಾಟು ಮೇಲೆ ಶೇ.5 ರಷ್ಟು ತೆರಿಗೆ ವಿಧಿಸಿದ್ದು, ಇದರಿಂದ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಹಾಗೂ ವರ್ತಕರಿಗೆ ತೊಂದರೆಯಾಗಲಿದೆ. ಕೂಡಲೇ ಸರ್ಕಾರ ಜಿಎಸ್‌ಟಿ ಕೌನ್ಸಿಲ್ ತನ್ನ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಆಮ್ ಆದ್ಮಿ ಉತ್ತರ ಕರ್ನಾಟಕ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
PublicNext
20/07/2022 07:00 pm