ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ಜೆಡಿಎಸ್ ಕಚೇರಿಯಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಹೆಸರನ್ನು ಅಂತಿಮಗೊಳಿಸಿದ್ದಾರೆ. ಇನ್ನು ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಮೂವರು ಯುವಕರ ಹೆಸರು ಚಾಲನೆಯಲ್ಲಿವೆ. ಅಕ್ಟೋಬರ್ 8ಕ್ಕೆ ಸಭೆ ಸೇರಿ ನಿರ್ಧಾರ ಮಾಡುತ್ತೇವೆ. ಸೋಲು ಗೆಲುವು ಬೇರೆ. ಆದರೆ ಆರ್.ಆರ್.ನಗರಕ್ಕೆ ಅಭ್ಯರ್ಥಿಯನ್ನಂತೂ ಹಾಕೇಹಾಕುತ್ತೇವೆ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಉಪಚುನಾವಣೆಯು ನವೆಂಬರ್ 3ರಂದು ನಡೆಯಲಿದ್ದು, ನವೆಂಬರ್ 10ಕ್ಕೆ ಮತ ಎಣಿಕೆ ನಡೆಯಲಿದೆ. ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಸತ್ಯನಾರಾಯಣ ಅವರು ಇತ್ತೀಚೆಗೆ ನಿಧನರಾಗಿದ್ದರು. ಹೀಗಾಗಿ ಇಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಜೆಡಿಎಸ್ ಪಕ್ಷವು ಸತ್ಯನಾರಾಯಣ ಅವರ ಪತ್ನಿಗೆ ಟಿಕೆಟ್ ನೀಡಿದೆ.
ಇತ್ತ ಕಾಂಗ್ರೆಸ್ ಪಕ್ಷವು ಮಾಜಿ ಸಚಿವ ಟಿ ಬಿ ಜಯಚಂದ್ರ ಅವರಿಗೆ ಟಿಕೆಟ್ ನೀಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಘೋಷಣೆಯಾಗಿಲ್ಲ. ಆದರೆ ಕೆಲ ದಿನಗಳ ಹಿಂದೆ ಡಾ ರಾಜೇಶ್ ಗೌಡ ಬಿಜೆಪಿಗೆ ಸೇರ್ಪಡೆಯಾಗಿದ್ದು, ಅವರಿಗೆ ಬಿಜೆಪಿ ಮಣೆ ಹಾಕಲಿದೆ ಎನ್ನಲಾಗಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್ ನ ಸತ್ಯನಾರಾಯಣ ಅವರು ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ ಅವರ ವಿರುದ್ಧ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
PublicNext
06/10/2020 04:42 pm