ಕೋಲಾರ: ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿಯೂ ದೂರು ಪುಸ್ತಕ ಇಟ್ಟು ರೋಗಿಗಳಿಂದ ದೂರು, ಸಲಹೆ, ಅಭಿಪ್ರಾಯ ಸಂಗ್ರಹಿಸುವ ಕ್ರಮ ಜಾರಿಗೆ ತರೋದಾಗಿ ಆರೋಗ್ಯ ಸಚಿವ ಡಾ. ಕೆ ಸುಧಾರಕ್ ಹೇಳಿದ್ದಾರೆ.
ನಗರದ ಎಸ್‌ಎನ್‌ಆರ್ ಆಸ್ಪತ್ರೆಗೆ ಭಾನುವಾರ ದಿಢೀರ್ ಭೇಟಿ ನೀಡಿ ರೋಗಿಗಳನ್ನು ಭೇಟಿಯಾಗಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದ್ದು, ಇಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ರೋಗಿಗಳನ್ನು ಭೇಟಿಯಾಗಿ ಚಿಕಿತ್ಸೆಯ ಬಗ್ಗೆ ವಿಚಾರಿಸಿದ ಸಚಿವರಿಗೆ ಸಮಾಧಾನದ ಉತ್ತರ ದೊರೆತಿದ್ದು, ಹಲವು ಪರೀಕ್ಷೆಗಳನ್ನು ಹೊರಗೆ ಬರೆದುಕೊಟ್ಟಿರುವ ಬಗ್ಗೆ ಕೆಲವರು ದೂರು ಸಲ್ಲಿಸಿದರು. ಜಿಲ್ಲಾಸ್ಪತ್ರೆಗಳಲ್ಲಿ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಹೊರಗೆ ಪರೀಕ್ಷೆಗೆ ಬರೆದುಕೊಟ್ಟಿರುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಸಚಿವರು ಹೇಳಿದರು.
ರಕ್ಷಣಾ ಸಿಬ್ಬಂದಿ ನೇಮಕಕ್ಕೆ ಸೂಚನೆ ಆಸ್ಪತ್ರೆಯ ಪ್ರಯೋಗಾಲಯಗಳು ಸೇರಿದಂತೆ ಇತರೆ ಅಗತ್ಯ ಕಡೆಗಳಲ್ಲಿ ರಕ್ಷಣಾ ಸಿಬ್ಬಂದಿ ಕೊರತೆ ಇರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಕೂಡಲೇ 10 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವಂತೆ ಆದೇಶ ನೀಡಿದರು.
PublicNext
01/08/2022 07:52 am