ಬೆಂಗಳೂರು : ಪಕ್ಷ ಬಯಸಿದರೆ ರಾಜೀನಾಮೆ ನೀಡುತ್ತೇನೆ. ಪಕ್ಷ ಏನು ಬಯಸುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ನಿಯಮದಂತೆ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧನಿದ್ದೇನೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಹಿನ್ನೆಲೆಯಲ್ಲಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಯಾವಾಗ ಸೂಚಿಸುತ್ತದೆಯೋ ಮರುಗಳಿಗೆಯಲ್ಲಿಯೇ ಸಚಿವ ಸ್ಥಾನ ಬಿಡಲು ಸಿದ್ಧನಿದ್ದೇನೆ.
ನನಗೆ ಇಷ್ಟುದೊಡ್ಡ ಮಟ್ಟದ ಹುದ್ದೆ ಸಿಕ್ಕಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ಪಕ್ಷ ಸಂಘಟನೆ ನನ್ನ ಮೇಲಿರುವ ಮಹತ್ವದ ಜವಾಬ್ದಾರಿ ಎಂದರು.
ಚುನಾವಣೆಗೆ ನಿಲ್ಲಬೇಕೆಂದು ವರಿಷ್ಠರು ಸೂಚಿಸಿದಾಗ ಮರು ಮಾತನಾಡದೆ ಸ್ಪರ್ಧಿಸಿದೆ. ಅದರಂತೆ ಗೆದ್ದು ಬಂದಿದ್ದೇನೆ. ಎಂದಿಗೂ ಕೂಡ ನಾನು ಸಚಿವನಾಗಬೇಕೆಂದು ಲಾಬಿ ಮಾಡಿರಲಿಲ್ಲ.
ಸಚಿವನಾಗುತ್ತೇನೆಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೂ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಪಕ್ಷ ಏನು ಸೂಚಿಸುತ್ತದೆಯೋ ಅದನ್ನಷ್ಟೇ ನಿಭಾಯಿಸಿದ್ದೇನೆ ಎಂದು ಹೇಳಿದರು.
PublicNext
28/09/2020 12:47 pm