ದಾವಣಗೆರೆ: ಮಂಕಿಪಾಕ್ಸ್ ಕುರಿತು ಗಂಭೀರವಾಗಿ ಪರಿಗಣಿಸಿದ್ದೇವೆ. ನಾಳೆ ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ಮಹತ್ವದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನಗರದ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಂಕಿಪಾಕ್ಸ್ ನಿಂದ ಪಕ್ಕದ ರಾಜ್ಯ ಕೇರಳದಲ್ಲಿ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ನಾವು ಎಚ್ಚರ ವಹಿಸುತ್ತೇವೆ. ಸಭೆ ನಡೆಸಿ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುವುದು. ಲ್ಯಾಬ್, ಔಷಧ ವಿಚಾರವಾಗಿ ಚರ್ಚೆ ನಡೆಸಿ ಕೆಲ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರರ ಮನೆಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಸಚಿವರ ಮನೆಗೆ ಭದ್ರತೆ ನೀಡಿಲ್ಲ. ಸಚಿವರ ಭದ್ರತೆಗೆ ಇದ್ದವರು ಹೊರಗಡೆ ಹೋಗಿದ್ದರು. ಅವರಿಗೆ ಸರಿಯಾಗಿ ಕೆಲಸ ನಿರ್ವಹಿಸುವಂತೆ ಹೇಳಲಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬ ಆರೋಪ ಮಾಡಿರುವುದರಲ್ಲಿ ಹುರುಳಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯತೆಯೇ ನಮ್ಮ ಉದ್ದೇಶ. ಆರೋಪ ಮಾಡುವ ಮುನ್ನ ಹಿಂದಿನ ಸರ್ಕಾರದಲ್ಲಿ ಏನು ಕೆಲಸ ಮಾಡಿದ್ದೇವೆ ಅನ್ನೋದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಇನ್ನು ಅಂಜನಾದ್ರಿ ಬೆಟ್ಟದ ಅಭಿವೃದ್ದಿಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈಗಾಗಲೇ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಅದರ ವೀಕ್ಷಣೆ ಮಾಡಿ ಅಭಿವೃದ್ಧಿಗೆ ನಿರ್ದೇಶನ ನೀಡಲಾಗುತ್ತೆ. ನಂತರ ಕೊಪ್ಪಳ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
PublicNext
01/08/2022 02:25 pm