ನವದೆಹಲಿ: ಲಾಕ್‌ಡೌನ್ ಕೊನೆಗೊಂಡಿರಬಹುದು, ಆದರೆ ಕೊರೊನಾ ಇನ್ನೂ ಮುಂದುವರಿದಿದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸಾಲು ಸಾಲು ಹಬ್ಬಗಳಿಂದಾಗಿ ಮಾರುಕಟ್ಟೆಗಳು ಮತ್ತೆ ಪ್ರಕಾಶಮಾನವಾಗಿವೆ. ಕಳೆದ 7-8 ತಿಂಗಳುಗಳಲ್ಲಿ ಪ್ರತಿಯೊಬ್ಬ ಭಾರತೀಯರ ಪ್ರಯತ್ನದಿಂದ ದೇಶವು ಸ್ಥಿರ ಪರಿಸ್ಥಿತಿಯಲ್ಲಿದೆ. ನಾವು ಅದನ್ನು ಹದಗೆಡಿಸಲು ಬಿಡಬಾರದು' ಎಂದು ಸಲಹೆ ನೀಡಿದರು.
ಇಂದು ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಕೆಯಾದವರ ಪ್ರಮಾಣ ಉತ್ತಮವಾಗಿದೆ. ಸಾವಿನ ಪ್ರಮಾಣ ಕಡಿಮೆ. ಭಾರತದ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 5,500 ಜನರು ಸೋಂಕಿಗೆ ಒಳಗಾಗಿದ್ದರೆ, ಅಮೆರಿಕ ಮತ್ತು ಬ್ರೆಜಿಲ್ ನಂತಹ ದೇಶಗಳಲ್ಲಿ ಈ ಸಂಖ್ಯೆ 25,000 ರಷ್ಟಿದೆ. ಭಾರತದ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ ಸಾವಿನ ಪ್ರಮಾಣ 83 ಆಗಿದ್ದರೆ, ಅಮೆರಿಕ, ಬ್ರೆಜಿಲ್, ಸ್ಪೇನ್, ಬ್ರಿಟನ್ ಮುಂತಾದ ದೇಶಗಳಲ್ಲಿಇದು 600 ಕ್ಕಿಂತ ಹೆಚ್ಚಿದೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ನಾವು ಅನೇಕ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಿದ್ದೇವೆ. ಅವುಗಳಲ್ಲಿ ಜನರು ಇನ್ನು ಮುಂದೆ ಜಾಗರೂಕರಾಗಿರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವಂತಿದೆ. ಇದು ಸರಿಯಲ್ಲ. ನೀವು ಮಾಸ್ಕ್ ಇಲ್ಲದೆ ಹೊರಗೆ ಬಂದರೆ ನಿಮ್ಮ ಕುಟುಂಬಗಳನ್ನು ನೀವು ಅಪಾಯಕ್ಕೆ ದೂಡುತ್ತೀರಿ ಎಂದು ಎಚ್ಚರಿಕೆ ನೀಡಿದರು.
PublicNext
20/10/2020 06:29 pm