ಬೆಂಗಳೂರು: ಖಾಸಗಿ ಸುದ್ದಿವಾಹಿನಿ ನಡೆಸಿರುವ ರಹಸ್ಯ ಕಾರ್ಯಾಚರಣೆ ಮೂಲಕ ನನ್ನ ಮೇಲೆ ಗಂಭೀರ ಆ ಪಾದನೆ ಮಾಡುತ್ತಿದೆ. ಕಾಣದ ಕೈಗಳ ಜತೆಗೂಡಿ ವರದಿ ಮಾಡಿರುವ ಸುದ್ದಿ ವಾಹಿನಿ ವಿರುದ್ಧ ಕಾನೂನು ಹೋರಾಟ ಮಾಡಲಿರುವುದಾಗಿ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಶನಿವಾರ ಪ್ರೆಸ್ ಕ್ಲಬ್‌ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೈತರ ಪರವಾಗಿ ಕೆಲಸ ಮಾಡುತ್ತಿರುವುದಕ್ಕೆ ಈ ರೀತಿಯ ಆಪಾದನೆಗಳನ್ನು ಮಾಡಿ ನನ್ನ ಹೆಸರನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ಪ್ರಸ್ತುತ ನನ್ನ ಮೇಲೆ ಮಾಡಿರುವ 35 ಕೋಟಿ ವ್ಯವಹಾರದ ಆಪಾದನೆಯ ಕುರಿತು ತನಿಖೆ ನಡೆಯಲಿ. ಆಗ ಯಾವುದು ಸತ್ಯ ಎಂದು ಎಲ್ಲರಿಗೂ ತಿಳಿಯುತ್ತದೆ. ಈ ಕುರಿತು ಸಿಎಂಗೆ ಮನವಿ ಪತ್ರ ಬರೆಯುತ್ತಿದ್ದೇನೆ ಎಂದರು.
ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ:
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಕೋಡಿಹಳ್ಳಿ, ಕುಮಾರಸ್ವಾಮಿ ತಮ್ಮ ರಾಜಾಕೀಯ ಹತಾಶೆಯನ್ನು ಈ ಮೂಲಕ ವ್ಯಕ್ತಪಡಿಸುವುದನ್ನು ಖಂಡಿಸುತ್ತೇನೆ. ನಾನು ತಪ್ಪು ಮಾಡಿದ್ದಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ನಿಮಗೆ ಗೌರವ ತರುವ ಕೆಲಸ ಮಾಡಿ. ಈ ರೀತಿಯ ಅನಗತ್ಯ ವಿವಾದವನ್ನು ಸೃಷ್ಟಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರೆಸ್ ಕ್ಲಬ್ ಎದುರು ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿಗೆ ಬರುತ್ತಿದ್ದಂತಹ ಸಂದರ್ಭದಲ್ಲಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಅವರಿಗೆ ಮಸಿ ಬಳಿಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಕೋಡಿಹಳ್ಳಿ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಗಳವನ್ನು ಹತೋಟಿಗೆ ತಂದರು.
PublicNext
28/05/2022 07:54 pm