ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ನಡೆಯಿತು. ಸಭೆಯಲ್ಲಿ ಹಲವಾರು ಮಹತ್ವದ ಚರ್ಚೆಗಳನ್ನು ನಡೆಸಲಾಗಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜಿ.ಸಿ.ಮಾಧುಸ್ವಾಮಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ ಲ್ಯಾಂಡ್ ಯೋಜನೆ 1500 ಕೋಟಿ ರೂ., 300 ಕೋಟಿಯಲ್ಲಿ ಸಿಹಿ ನೀರು ಸಂಗ್ರಹಕ್ಕೆ ಕಾರ್ ಲ್ಯಾಂಡ್ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.
ಪ್ರಮುಖ ನಿರ್ಣಯಗಳು:
* ಉಡುಪಿ ಜಿಲ್ಲೆಯ ಹೊಸ ಹೆಬ್ರಿ ತಾಲೂಕಿನಲ್ಲಿ ಹೊಸ ಹೊಬಳಿ ನಿರ್ಮಾಣ ಮಾಡಲು ಸಂಪುಟ ಒಪ್ಪಿಗೆ
* ವೃದ್ಧಾಪ್ಯ ವೇತನ 1000 ರೂ ನಿಂದ 1200 ಗೆ ಏರಿಕೆ, ಸಂಧ್ಯಾ ಸುರಕ್ಷೆ ಯೋಜನೆಯಡಿ ಪಿಂಚಣಿ ಹೆಚ್ಚಳ, 36 ಲಕ್ಷ ವೃದ್ಧ ಫಲಾನುಭವಿಗಳಿಗೆ ಅನುಕೂಲ
* ಕರ್ನಾಟಕ ರಾಜ್ಯ ಮತ್ತು ಕೃಷಿ ಅಭಿವೃದ್ಧಿ ಬಾಂಕ್ಗಳ ಪುನಶ್ಚೇತನಕ್ಕೆ ನಬಾರ್ಡ್ನಿಂದ ಸಾಲ ಪಡೆಯಲು ಸಂಪುಟ ಅನುಮತಿ ನೀಡಿದ್ದು 1550 ಕೋಟಿ ಹಣವನ್ನು ಒದಗಿಸಲಾಗುವುದು.
* ರಾಜ್ಯ ಪೊಲೀಸ್ ನೇಮಕಾತಿ ತಿದ್ದುಪಡಿಗೆ ಅನುಮತಿ ನೀಡಲಾಗಿದ್ದು ಭಡ್ತಿ ಪಡೆಯಲು ನಿಗದಿಪಡಿಸಲಾಗಿದ್ದ 5 ವರ್ಷಗಳನ್ನು 4 ವರ್ಷಗಳಿಗೆ ಇಳಿಸಲಾಗಿದೆ.
* ಹಿಪ್ಪರಗಿ ತಿರುವು ಬ್ಯಾರೇಜ್ ತಡೆಗೋಡೆ ನಿರ್ಮಾಣ ಸಂಬಂಧಿಸಿ ತಡೆಗೋಡೆ ನಿರ್ಮಾಣಕ್ಕೆ 28 ಕೋಟಿ ನೀಡಲು ಸಮ್ಮತಿ
* ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್‌ಗಳ ಹಂಚಿಕೆಗೆ 24.85 ಕೋಟಿ ರೂ. ಬಿಡುಗಡೆ
* ಪೊಲೀಸ್ ಆಧುನೀಕರಣ ಯೋಜನೆಯಡಿ ಬೆಂಗಳೂರಿಗೆ ಅತ್ಯಾಧುನಿಕ ಡಿಜಿಟಲ್ ಸಂಪರ್ಕ ವ್ಯವಸ್ಥೆ, 14.65 ಕೋಟಿ ವೆಚ್ಚ
* ಸಮುದ್ರದಿಂದ ಉಪ್ಪು ನೀರು ನದಿಗಳಿಗೆ ಬರದಂತೆ ತಡೆಯುವ ಖಾರ್‌ಲ್ಯಾಂಡ್ ಯೋಜನೆಗೆ ಸಂಪುಟದ ತಾತ್ವಿಕ ಒಪ್ಪಿಗೆ
* 1500 ಕೋಟಿ ವೆಚ್ಚದ ಖಾರ್‌ಲ್ಯಾಂಡ್ ಯೋಜನೆ, ಸದ್ಯ 300 ಕೋಟಿ ರೂ. ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ
* ಖಾನಾಪುರ ತಾಳಗುಪ್ಪ ಹೆದ್ದಾರಿಯಲ್ಲಿ ದ್ವಿಪಥಕ್ಕೆ 15 ಕೋಟಿ ರೂ. ಬಿಡುಗಡೆಗೆ ಸಂಪುಟ ಒಪ್ಪಿಗೆ
* ಕಾರ್ಕಳ ತಾಲ್ಲೂಕಿನಲ್ಲಿ ಹೊಸದಾಗಿ ಹೆಬ್ರಿ ಹೋಬಳಿ ರಚನೆಗೆ ಸಂಪುಟದ ಒಪ್ಪಿಗೆ
* ದತ್ತ ಪೀಠಕ್ಕೆ ಅರ್ಚಕರ ನೇಮಕ ವಿಚಾರ. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚೆ. ಕಾನೂನು ಸಚಿವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ. ಸಚಿವರಾದ ಆರ್. ಅಶೋಕ್, ಸುನೀಲ್ ಕುಮಾರ್, ಶಶಿಕಲಾ ಜೊಲ್ಲೆ ಸಮಿತಿ ಸದಸ್ಯರು. ಮುಂದಿನ ಪ್ರಕ್ರಿಯೆ ನಡೆ ಬಗ್ಗೆ ಸಮಿತಿ ಚರ್ಚಿಸಿ ವರದಿ ಕೊಡಲಿದೆ
* ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಇನ್ನೂ ಕಾಯ್ದೆ ಆಗಿಲ್ಲ. ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇನ್ನೂ ಸಹಿ ಹಾಕಿಲ್ಲ. ಸಭಾಪತಿಯವರ ಸಹಿ ಬಳಿಕ ರಾಜ್ಯಪಾಲರಿಗೆ ಮಸೂದೆ ಕಳಿಸಲು ತೀರ್ಮಾನ. ರಾಜ್ಯಪಾಲರ ಒಪ್ಪಿಗೆ ಬಳಿಕ ಮಸೂದೆ ಕಾಯ್ದೆಯಾಗಿ ಬದಲಾವಣೆ. ನಂತರ ಸುಪ್ರೀಂ ಕೋರ್ಟ್ ಗಮನಕ್ಕೆ ತರಲು ಸಂಪುಟದಲ್ಲಿ ತೀರ್ಮಾನ
ಮಂಡ್ಯ ಶುಗರ್ ಕಾರ್ಖಾನೆ ಪ್ರಾರಂಭದ ಚರ್ಚೆ ಕುರಿತು ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕಾ.?ಖಾಸಗಿಯವರಿಗೆ ನೀಡಬೇಕಾ.? ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡಿದೆ ಸಚಿವ ನಾರಾಯಣಗೌಡ, ಗೋವಿಂದ್ ಕಾರಜೋಳ, ಆರ್.ಅಶೋಕ್, ಶಂಕರಗೌಡ ಮುನೇನಕೊಪ್ಪ ಈ ಕಮೀಟಿಯ ನೇತೃತ್ವ ವಹಿಸಿಕೊಳ್ಳುವರು ಎಂದು ಸಚಿವ ಮಾಹಿತಿ ನೀಡಿದ್ದಾರೆ.
PublicNext
05/10/2021 03:56 pm