ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸ್ವಕ್ಷೇತ್ರ ಗೋಕಾಕ್‌ನಲ್ಲಿರುವ ತಹಶೀಲ್ದಾರ್ ಕಚೇರಿಗೆ ಫೆಬ್ರವರಿ 15ರಂದು ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಬೀಗ ಹಾಕಿ ಹೊರಗೆ 70 ರಿಂದ 80 ಜನ ಕುಳಿತ ಘಟನೆ ನಡೆದಿದೆ.ಬೀಗ ಅಧಿಕಾರಿಗಳೇ ಹಾಕಿದರೋ ಅಥವಾ ಹಾಕಿಸಿದರೋ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.
ಸರ್ಕಾರಿ ಕಚೇರಿಯ ವರ್ಕಿಂಗ್ ಅವರ್ ನಲ್ಲೇ ಎರಡು ಗಂಟೆಗಳ ಕಾಲ ಸರ್ಕಾರಿ ಕಚೇರಿಯೇ ಲಾಕ್ ಆಗಿದ್ದರಿಂದ ದೂರದ ಊರುಗಳಿಂದ ಬಂದಿದ್ದ ಸಾರ್ವಜನಿಕರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಕುರಿತು ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫೋಟೋ ಹಾಗೂ ವಿಡಿಯೋ ಬಿಡುಗಡೆ ಮಾಡಿದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಗೋಕಾಕ್ ತಹಶಿಲ್ದಾರ್ ಕಚೇರಿ ಲಾಕ್ ಮಾಡಿ ಕಡತಗಳಿಗೆ ಸಹಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಚೇರಿಗೆ ಬೀಗ ಹಾಕಿದ ವದಂತಿ ಇದೆ ಎಂದು ಅಶೋಕ್ ಪೂಜಾರಿ ಆರೋಪಿಸಿದ್ದು, 'ಫೆಬ್ರವರಿ 15ರಂದು ಮಧ್ಯಾಹ್ನ 2ರಿಂದ 4ರವರೆಗೆ ಗೋಕಾಕ್ ತಹಶಿಲ್ದಾರ್ ಕಚೇರಿಗೆ ಬೀಗ ಹಾಕಿದ್ರು.
ಬೀಗ ಹಾಕಿದ ಕಚೇರಿ ಎದುರು 70 ರಿಂದ 80 ಜನರು ಕುಳಿತಿದ್ರು. ತಹಶಿಲ್ದಾರ್‌ಗೆ ಗನ್ ಪಾಯಿಂಟ್ ಹಿಡದ ಹಾಗೇ ಮಾಡಿ ಕಡತಗಳಿಗೆ ಸಹಿ ಎಂಬ ವದಂತಿ ಇದೆ. ಗೋಕಾಕ್ ತಹಶಿಲ್ದಾರ್ ಕಚೇರಿಯಲ್ಲಿ ನಡೆದ ವಾಸ್ತವತೆ ಏನು? ಈ ಬಗ್ಗೆ ಗೋಕಾಕ್ ತಹಶಿಲ್ದಾರ್ ಸ್ಪಷ್ಟನೆ ನೀಡಬೇಕು.ಇಲ್ಲವಾದ್ರೆ ಜಿಲ್ಲಾಧಿಕಾರಿ ಹಾಗೂ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಲಿ. ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಈ ವೇಳೆ ತಹಶಿಲ್ದಾರ್ ಕಚೇರಿ ಒಳಗಿದ್ದರೆಂಬ ಊಹಾಪೋಹ ಇದೆ.
ಈ ಬಗ್ಗೆ ಗೋಕಾಕ್ ತಹಶಿಲ್ದಾರ್ ಸ್ಪಷ್ಟನೆ ಕೊಡಬೇಕು.ತಹಶಿಲ್ದಾರ್ ಕಚೇರಿಗೆ ಬೀಗ ಏಕೆ ಹಾಕಿದ್ದೀರಿ ಅಂತಾ ತಹಶಿಲ್ದಾರ್‌ಗೆ ಕೇಳಿದೆ. ಆಗ ನಮ್ಮ ಕಚೇರಿಯ ಎರಡ್ಮೂರು ಫೈಲ್ ಮಿಸ್ ಆಗಿದೆ.
ಹೀಗಾಗಿ ಚೆಕ್ ಮಾಡಲು ನಾನೇ 15 ನಿಮಿಷ ಬೀಗ ಹಾಕಿದ್ದೆ ಅಂದ್ರು. ಹೊರಗೆ 70 ರಿಂದ 80 ಜನರ ಕಾವಲು ಇಟ್ಟು ಬೀಗ ಹಾಕಿ ಕಡತ ಹುಡುಕುವ ಪರಿಸ್ಥಿತಿ ಏನಿತ್ತು? ಕಾನೂನಾತ್ಮಕ ಘಟನೆ ನಡೆದಿದ್ರೆ ತಹಶಿಲ್ದಾರ್ ಕಚೇರಿಗೆ ಬೀಗ ಹಾಕುವ ಪರಿಸ್ಥಿತಿ ಬರಲ್ಲ. ತಹಶಿಲ್ದಾರ್ ಕಚೇರಿಯೊಳಗೆ ಏನೋ ಕಾನೂನು ಬಾಹಿರ ಕೆಲಸ ನಡೆದಿದೆ. ಈ ಬಗ್ಗೆ ತಹಶಿಲ್ದಾರ್, ಡಿಸಿ, ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಬೆಳಗಾವಿಯಲ್ಲಿ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಒತ್ತಾಯಿಸಿದ್ದಾರೆ.
PublicNext
18/02/2021 09:59 pm