ದಾವಣಗೆರೆ: "ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಲಾಗುತ್ತಿದೆ. ಆ ಮಟ್ಟಕ್ಕೆ ಇಳಿದು ಉತ್ತರವಾಗಲೀ, ಪ್ರತಿಕ್ರಿಯೆ ಆಗಲೀ ನೀಡುವ ಮನುಷ್ಯ ನಾನಲ್ಲ. ಕರ್ನಾಟಕದ ಜನ ನೋಡಿಕೊಳ್ಳುತ್ತಾರೆ. ಬೇಕಾದಂತಹ ಉತ್ತರವನ್ನು ಜನರೇ ನೀಡುತ್ತಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶಿಬೇಕು. ಎಲ್ಲವನ್ನೂ ಪರಾಮರ್ಶಿಸಿ ವಿವಾದಕ್ಕೆ ಕೊನೆ ಹಾಡಬೇಕು'' ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಪಠ್ಯಪುಸ್ತಕ ಮರು ಪರಿಷ್ಕರಣೆ ಸಂಬಂಧ ಈಗ ವಿವಾದ ಆಗ್ತಾ ಇದೆ. ನನ್ನ ಕಳಕಳಿ ಎಂದರೆ ಶೈಕ್ಷಣಿಕ ಕ್ಷೇತ್ರದ ಘನತೆ ಉಳಿಯಬೇಕು ಎಂಬುದಷ್ಟೇ ಎಂದರು.
ವೈಯಕ್ತಿಕ ತೇಜೋವಧೆ ಮಾಡುವ ರೀತಿಯಲ್ಲಿ ವಿವಾದ ನಡೆಯುತ್ತಿದೆ. ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಈ ವಿವಾದಗಳು ತಾರಕಕ್ಕೇರುತ್ತಿರುವ ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಧ್ಯಪ್ರವೇಶಿಸಬೇಕು. ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ಬರಗೂರು ಹೇಳಿದರು.
ಅನೇಕ ಮುಖ್ಯವಾದ ಲೇಖಕರು ಪಠ್ಯದಿಂದ ಹೋಗಿರುವುದರಿಂದ ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಸಾಧ್ಯವಾಗದಿರುವ ಸನ್ನಿವೇಶ ಸೃಷ್ಟಿಯಾಗಿದೆ. ಇವೆಲ್ಲವನ್ನೂ ಪರಿಶೀಲಿಸಿ ಸಿಎಂ ವಿವಾದಕ್ಕೆ ತೆರೆ ಎಳೆಯಬೇಕು. ವಿದ್ಯಾರ್ಥಿಗಳು, ಪೋಷಕರಲ್ಲಿ ಪಠ್ಯಪರಿಷ್ಕರಣೆ ವಿವಾದದಿಂದ ಬೇಸರವಾಗಬಾರದು, ನೋವುಂಟಾಗಬಾರದು. ಶಿಕ್ಷಣದ ಘನತೆ ಹೋಗಬಾರದು ಎಂಬ ಕಾರಣಕ್ಕೆ ಸಿಎಂ ಅವರು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
PublicNext
29/05/2022 05:27 pm