ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 'ಈ ವರ್ಷದಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೈಸಿಕಲ್ ಕೊಡಲಾಗುವುದು' ಎಂದು ಸಿಎಂ ಪ್ರಕಟಿಸಿದ್ದಾರೆ.
ತುಮಕೂರಿನ ಎಂಪ್ರೆಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ, ಉಚಿತವಾಗಿ ಪಠ್ಯ ಪುಸ್ತಕ ವಿತರಣೆ, ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿನಿಯೊಬ್ಬರು, ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಿಗೆ ಸಾಕಷ್ಟು ದೂರ ನಡೆದುಕೊಂಡು ಹೋಗಬೇಕಿದೆ. ಹಿಂದಿನಂತೆ ಸೈಕಲ್ ಕೊಟ್ಟರೆ ಸಕಾಲಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದರು.
ವಿದ್ಯಾರ್ಥಿನಿ ಮನವಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯೊ ಅವರು, 'ಪ್ರಶ್ನೆಗೆ ಮುಖ್ಯಮಂತ್ರಿ ಈ ಭರವಸೆ ನೀಡಿದರು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಶಾಲೆಗಳು ನಡೆದಿಲ್ಲ. ಹಾಗಾಗಿ ಸೈಕಲ್ ಕೊಡಲು ಸಾಧ್ಯವಾಗಿಲ್ಲ. ಈ ವರ್ಷ ವ್ಯವಸ್ಥೆ ಮಾಡಲಾಗುವುದು ಎಂದರು.
ಇನ್ನು ಶಾಲಾ ಮಕ್ಕಳ ಜಿಲ್ಲಾ ದರ್ಶನ ಹಾಗೂ ಕರ್ನಾಟಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಹೆಣ್ಣು ಮಕ್ಕಳಿಗೆ ಶುಚಿ ಪ್ಯಾಡ್ ನೀಡಲಾಗುವುದು. ಸರ್ಕಾರಿ ಶಾಲೆಗಳಲ್ಲೂ ಎಸ್‌ಡಿಎಂಸಿ ಮೂಲಕ ಗುರುತಿನ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಶಾಲೆಗಳಲ್ಲಿ ಕ್ರೀಡಾ ಸಾಮಗ್ರಿಗಳ ಕೊರತೆ ಬಗ್ಗೆ ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ‘ಕ್ರೀಡಾ ಪರಿಕರ ಕೊಳ್ಳಲು ಹಿಂದಿನ ವರ್ಷ 5 ಕೋಟಿ ರೂ. ನೀಡಲಾಗಿತ್ತು. ಈ ವರ್ಷ 10 ಕೋಟಿ ರೂ. ಕೊಡಲಾಗುವುದು. ಮಧ್ಯಾಹ್ನದ ಬಿಸಿ ಊಟದಲ್ಲಿ ಪೌಷ್ಟಿಕಾಂಶದ ಪ್ರಮಾಣ ಹೆಚ್ಚಿಸಲು ಸಿರಿ ಧಾನ್ಯಗಳ ಆಹಾರ ನೀಡಲು ಉದ್ದೇಶಿಸಲಾಗಿದೆ' ಎಂದು ಹೇಳಿದರು.
PublicNext
16/05/2022 06:01 pm