ಹೊಸ ದಿಲ್ಲಿ: ಶಿಕ್ಷಣವಂಚಿತರಾಗುವ ಮುಸ್ಲಿಂ ಬಾಲಕಿಯರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಪ್ರಮುಖ ಆದ್ಯತೆ ನೀಡೋದಾಗಿ ಭರವಸೆ ನೀಡಿದ್ದಾರೆ.
ಅಲಿಗಢ ಮುಸ್ಲಿಂ ವಿವಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ವಿದ್ಯಾರ್ಥಿನಿಯರ ಪ್ರಮಾಣ ಶೇ. 35ಕ್ಕೆ ಏರಿಕೆಯಾಗಿದೆ, ಹೀಗಾಗಿ, ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕಳೆದ 70 ವರ್ಷಗಳಿಂದ ಮುಸ್ಲಿಂ ಬಾಲಕಿಯರು ಶಾಲೆಯಿಂದ ಹೊರಗುಳಿಯುವ ಪ್ರಮಾಣ ಶೇ. 70ರಷ್ಟಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಅಡಿ ಗ್ರಾಮಗಳಲ್ಲಿ, ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿತು. ಅದರಲ್ಲೂ ಬಾಲಕಿಯರ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮೊದಲು ಆದ್ಯತೆ ನೀಡಲಾಗಿತ್ತು. ಇದೀಗ ದೇಶದಲ್ಲಿ ಮುಸ್ಲಿಂ ಬಾಲಕಿಯರು ಶಾಲೆ ತೊರೆಯುವ ಪ್ರಮಾಣ ಶೇ. 70ರಿಂದ ಶೇ. 30ಕ್ಕೆ ಇಳಿಕೆ ಕಂಡಿದೆ ಎಂದ ಪ್ರಧಾನಿ ಮೋದಿ, ಮುಂದಿನ ದಿನಗಳಲ್ಲಿ ಶಾಲೆಯಿಂದ ಹೊರಗುಳಿಯುವ ಬಾಲಕಿಯರ ಪ್ರಮಾಣವನ್ನು ಕಡಿತಗೊಳಿಸಲು ಸರ್ಕಾರ ನಿರಂತರ ಶ್ರಮ ವಹಿಸಲಿದೆ ಎಂದು ಭರವಸೆ ನೀಡಿದರು.
PublicNext
22/12/2020 02:43 pm