ಬೆಂಗಳೂರು: ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯ ಆಶಯದಂತೆ ಮಕ್ಕಳನ್ನು ಮುಂದಿನ ತರಗತಿಗಳಿಗೆ ಮರು ದಾಖಲಾತಿ ಮಾಡುವುದು ಪೋಷಕರ ಕರ್ತವ್ಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ರಾಜ್ಯದ ವಿವಿಧ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಶಾಲಾ ಮಂಡಳಿಗಳು, ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಉಪಕ್ರಮಗಳ ಕುರಿತು ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳು ಓದಿದ ಶಾಲೆ ಇಲ್ಲವೇ ತಮಗೆ ಅನುಕೂಲವಾದ ಶಾಲೆಗಳಲ್ಲಿ ಮರು ದಾಖಲಾತಿಗೊಳಿಸಲು ಕ್ರಮ ವಹಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗೆ ದಾಖಲಾತಿ ಮಾಡದೇ ಇರುವುದು ಪರಿಹಾರವಾಗುವುದಿಲ್ಲ. ಇದು ಮಕ್ಕಳ ಹಕ್ಕಿನ ಕಸಿತವೂ ಆಗುತ್ತದೆ ಎಂದು ತಿಳಿಸಿದರು.
ಪೋಷಕರು ತಮ್ಮ ಮಕ್ಕಳನ್ನು ಮರುದಾಖಲಾತಿ ಮಾಡುವುದರಿಂದ ರಾಜ್ಯದ ಶಾಲೆಗಳಲ್ಲಿ ತರಗತಿವಾರು ಮಕ್ಕಳ ದಾಖಲಾತಿ ಸಂಖ್ಯೆ ಲೆಕ್ಕಕ್ಕೆ ದೊರೆಯಲಿದ್ದು, ಅದು ಮುಂದಿನ ತರಗತಿಗಳಿಗೆ ಮಕ್ಕಳನ್ನು ಉತ್ತೀರ್ಣಗೊಳಿಸಲು ಅನುವಾಗಲಿದೆ. ಮಕ್ಕಳ ಮರು ದಾಖಲಾತಿಗೆ ಎರಡು ಬಾರಿ ಸಮಯ ವಿಸ್ತರಿಸಲಾಗಿತ್ತು. ಆದರೂ ಕೆಲ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗಳಿಗೆ ಇನ್ನೂ ಮರು ದಾಖಲಾತಿ ಮಾಡದಿರುವುದಕ್ಕೆ ಕೋವಿಡ್ ಸಾಂಕ್ರಾಮಿಕ ಒಂದು ನೆಪವಾಗಬಾರದು ಎಂದು ಹೇಳಿದರು.
PublicNext
14/12/2020 08:10 pm