ಬೆಂಗಳೂರು:ಈ ವರ್ಷ ಶಾಲಾ ಶುಲ್ಕ ಕಟ್ಟದ ಮಕ್ಕಳನ್ನು ಮುಂದಿನ ವರ್ಷಕ್ಕೆ ಪಾಸ್ ಮಾಡಲ್ಲ ಎಂದು ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಹೇಳುವಂತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಶಾಲಾ-ಕಾಲೇಜು ಆರಂಭ ಮಾಡಬೇಕೋ ಬೇಡವೋ ಎಂಬುದರ ಕುರಿತು ಸೋಮವಾರ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸಚಿವ ಸುರೇಶ್‍ಕುಮಾರ್ ಮಾತನಾಡಿದರು. ಈ ವರ್ಷ ಶಾಲೆ ಆರಂಭಿಸಲ್ಲ. ರಾಜ್ಯದಲ್ಲಿ ಡಿಸೆಂಬರ್ ವರೆಗೂ ಯಾವುದೇ ಶಾಲೆ-ಕಾಲೇಜು ಓಪನ್ ಆಗಲ್ಲ ಎಂದರು. ಶಾಲೆ ಆರಂಭದ ಕುರಿತು ಡಿಸೆಂಬರ್ ಮೂರನೇ ವಾರದಲ್ಲಿ ಮತ್ತೊಂದು ಸಭೆ ನಡೆಯಲಿದೆ. ಪರಿಸ್ಥಿತಿ ನೋಡಿಕೊಂಡು ಮುಂದೆ ನಿರ್ಧಾರ ಮಾಡ್ತೀವಿ ಎಂದು ಹೇಳಿದರು.
ಖಾಸಗಿ ಶಾಲೆಗಳ ಶುಲ್ಕ ವಸೂಲಿ ವಿಚಾರದ ಬಗ್ಗೆಯೂ ಮಾತನಾಡಿದರು. ಸೆಕೆಂಡ್ ಟರ್ಮ್ ಫೀಸ್ ಕಲೆಕ್ಟ್ ಮಾಡಲು ಖಾಸಗಿ ಶಾಲೆಗಳು ಅನುಮತಿ ಕೇಳಿವೆ. ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಫೀಸ್ ಕಲೆಕ್ಟ್ ಮಾಡಿದ ತಕ್ಷಣ ಮೊದಲ ಆಧ್ಯತೆ ಶಿಕ್ಷಕರ ವೇತನ ಕೊಡಲು. ಸ್ಕೂಲ್ ಫೀಸ್ ಕಡಿಮೆ ಮಾಡುವ ವಿಚಾರದ ಅರ್ಜಿ ಕೋರ್ಟ್‍ನಲ್ಲಿದೆ. ಈಗ ಅದರ ಬಗ್ಗೆ ಏನೂ ಹೇಳೋಕೆ ಆಗಲ್ಲ ಎಂದ ಸಚಿವರು, ಶುಲ್ಕ ಕಟ್ಟಿಲ್ಲ ಮಕ್ಕಳನ್ನು ಮುಂದಿನ ವರ್ಷಕ್ಕೆ ಪಾಸ್ ಮಾಡಲ್ಲ ಎಂದು ಖಾಸಗಿ ಶಾಲೆಗಳು ಹೇಳುವಂತಿಲ್ಲ. ಸರ್ಕಾರ ಈ ಬಗ್ಗೆ ಶೀಘ್ರವೇ ಒಂದು ನಿರ್ಧಾರ ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದರು.
PublicNext
23/11/2020 04:08 pm