ಗುವಾಹಟಿ: ಶನಿವಾರ ರಾತ್ರಿ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ (KNP) ಬಳಿ ವಾಸಿಸುವ ಇಬ್ಬರು ಗ್ರಾಮಸ್ಥರು ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರು ದಾಖಲಿಸಿದ್ದಾರೆ.
ಶನಿವಾರ ಸಂಜೆ ಪ್ರವಾಸಿಗರಿಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸದ್ಗುರು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅಸ್ಸಾಂ ಕ್ಯಾಬಿನೆಟ್ ಸಚಿವ ಜಯಂತ ಮಲ್ಲ ಬರುವಾ ಅವರೊಟ್ಟಿಗೆ ರಾತ್ರಿ ಜೀಪ್ ಸವಾರಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ಗ್ರಾಮಸ್ಥರು ದಾಖಲಿಸಿರುವ ದೂರಿನ ಪ್ರಕಾರ ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಉಲ್ಲಂಘನೆಯಾಗಿದೆ. ಪೂರ್ವ ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಬೊಕಾಖಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಉದ್ಯಾನದೊಳಗೆ ಜೀಪ್ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಸದ್ಗುರು ಮತ್ತು ಹಿಮಂತ ಅವರು ಜೀಪ್ ಚಾಲನೆ ಮಾಡಿದ್ದಾರೆ. ಅವರಿಗಾಗಿ ಕಾನೂನು ಸಡಿಲಿಸುವುದು ಕಾಜಿರಂಗ ಮತ್ತು ಅಲ್ಲಿಯ ಪ್ರಾಣಿಗಳ ಸಂರಕ್ಷಣೆಗೆ ವಿಪತ್ತು ಉಂಟುಮಾಡುತ್ತದೆ. ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಅವರಿಬ್ಬರೂ ಸಾರ್ವಜನಿಕರಿಗೆ ಕ್ಷಮೆ ಯಾಚಿಸುವಂತೆ ಕಾನೂನಿನಡಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಆರೋಪವನ್ನು ನಿರಾಕರಿಸಿದ್ದಾರೆ. ಸಾರ್ವಜನಿಕರು ರಾತ್ರಿಯ ಸಮಯದಲ್ಲಿ ನ್ಯಾಷನಲ್ ಪಾರ್ಕ್‌ಗೆ ಭೇಟಿ ನೀಡಬಾರದು ಎಂದು ಯಾವುದೇ ನಿಯಮ ಇಲ್ಲ ಎಂದು ಅವರು ತಿಳಿಸಿದ್ದಾರೆ.
PublicNext
26/09/2022 04:29 pm