ದಾವಣಗೆರೆ: ಚನ್ನಗಿರಿ ತಾಲೂಕಿನ ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳು ಶಿಕ್ಷಕರೊಬ್ಬರ ಮೇಲೆ ನಡೆಸಿದ ಪುಂಡಾಟಿಕೆ, ಹಲ್ಲೆ, ವಿಕೃತಿ ಪ್ರದರ್ಶನ ಪ್ರಕರಣ ಗಂಭೀರವಾಗಿದೆ. ಈ ರೀತಿಯ ದುರ್ವತನೆ ತೋರಿದ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಮೊದಲು ಕಳುಹಿಸಿ. ಇಲ್ಲಿ ಓದುವುದು ಬೇಡ. ಇಂಥವರಿಂದ ಶಾಲೆಗೂ ಕೆಟ್ಟ ಹೆಸರು. ಶಿಕ್ಷೆ ಕೊಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ವಿಡಿಯೋ ವೈರಲ್ ಆಗಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೂಡಲೇ ಶಾಲೆಗೆ ಆಗಮಿಸಿ ಗ್ರಾಮಸ್ಥರು ಮತ್ತು ಶಿಕ್ಷಕರು, ಪ್ರಾಂಶುಪಾಲರ ಜೊತೆ ಸಭೆ ನಡೆಸಿದರು. ಮಾತ್ರವಲ್ಲ, ಇಂಥ ಘಟನೆ ಆಗಿರುವುದು ನಿಜಕ್ಕೂ ಬೇಸರದ ಸಂಗತಿ. ಕೂಡಲೇ ಕೀಟಲೆ ಮಾಡಿದ ಹುಡುಗರ ಪೋಷಕರನ್ನು ಕರೆಯಿಸಿ ಎಚ್ಚರಿಕೆ ನೀಡಿ, ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿ ಒಳ ಹಾಕಿ. ಇಂದು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ಪುಂಡಾಟಿಕೆ ಮಾಡಿದ ವಿದ್ಯಾರ್ಥಿಗಳ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಪೊಲೀಸರಿಗೆ ಹೇಳಿದರು.
ಕೀಟಲೆಗೊಳಗಾದ ಶಿಕ್ಷಕ ಪ್ರಕಾಶ್ ಹೇಳಿದ್ದೇನು...?
ಇನ್ನು ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ಹಿಂದಿ ಶಿಕ್ಷಕ ಪ್ರಕಾಶ್ ಅವರು ಶಾಲೆಗೆ ಬಂದರು. ಶಾಸಕರು ಸಭೆ ನಡೆಸುತ್ತಿರುವ ಮಧ್ಯೆ ಆಗಮಿಸಿದ ಅವರು ಅಂದು ನಡೆದ ಘಟನೆ ಬಗ್ಗೆ ವಿವರಿಸಿದರು. ಅಂದು ನಾನು ಪಾಠ ಮಾಡುತ್ತಿದ್ದೆ. ಈ ವೇಳೆ ಸೂರ್ಯಕಾಂತಿ ಬೀಜಗಳು, ಗುಟ್ಕಾ ಪ್ಯಾಕೆಟ್ ಗಳು ಬಿದ್ದಿದ್ದವು. ಇದನ್ನು ನೋಡಿದರೆ ಇದನ್ನು ಶಾಲೆ ಅನ್ನುತ್ತಾರಾ. ಈ ರೀತಿ ಎಲ್ಲೆಂದರಲ್ಲಿ ಬಿಸಾಡುವುದು ಸರಿಯಲ್ಲ ಎಂದು ಹೇಳಿ ನಾನು ಪಾಠ ಮಾಡಲು ಮುಂದಾದೆ. ಆಗ ಕೆಲವರು ಬಂದು ಬಕೆಟ್ ಅನ್ನು ತಲೆ ಮೇಲೆ ಇಟ್ಟರು. ಆದರೆ ಯಾರೂ ಈ ರೀತಿ ಮಾಡಿದರು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗಿಲ್ಲ ಎಂದು ಘಟನೆಯನ್ನು ವಿವರಿಸಿದರು.
PublicNext
10/12/2021 04:47 pm