ಚಿಕ್ಕಬಳ್ಳಾಪುರ: ಶಿವಮೊಗ್ಗ ಸ್ಫೋಟ ಸಂಭವಿಸಿದ ನಂತರ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿತ್ತು. ನೀವೇನು ಕಣ್ಮುಚ್ಚಿ ಕುಳಿತಿದ್ದೀರ? ಎಫ್ಐಆರ್ ಆದ ಮೇಲೂ ಕ್ರಷರ್ ಮಾಲೀಕ ಯಾಕೆ ಅರೆಸ್ಟ್ ಆಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗೃಹ ಸಚಿವರು ಬಸವರಾಜ ಬೊಮ್ಮಾಯಿ ಅವರು ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇ ವೇಳೆ ಸ್ಥಳದಲ್ಲೇ ಸುಮಾರು 45 ನಿಮಿಷ ಜಿಲ್ಲಾಧಿಕಾರಿ ಲತಾ ಹಾಗೂ ಎಸ್ಪಿ ಮಿಥುನ್ ಕುಮಾರ್ ಅವರನ್ನ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ಕೊಟ್ಟಿದ್ದಾರೆ.
ಆಗಿದ್ದೇನು?: ಹಿರೇನಾಗವಲ್ಲಿ ಗ್ರಾಮದ ಭ್ರಮರವಾಸಿನಿ ಎಂ ಸ್ಯಾಂಡ್ ಕ್ರಷರ್ಗೆ ಅಕ್ರಮವಾಗಿ ಜಿಲೆಟಿನ್ ಸಂಗ್ರಹ ಮಾಡಿದ್ದ ಬಗ್ಗೆ ಫೆಬ್ರವರಿ 7ರಂದು ಪೊಲೀಸ್ ದೂರು ದಾಖಲಾಗಿತ್ತು. ಪೊಲೀಸರು ರೇಡ್ ಕೂಡ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕೂಡ ಪೊಲೀಸರು ಕ್ರಷರ್ಗೆ ಭೇಟಿ ನೀಡಿದ್ದರು. ಹೀಗಾಗಿ ಸ್ಫೋಟಕಗಳನ್ನು ಬಚ್ಚಿಡಲು ನಿನ್ನೆ ರಾತ್ರಿ ಕ್ರಷರ್ನಲ್ಲಿದ್ದ ಜಿಲೆಟಿಟ್ ಅನ್ನು ಚೀಲಗಳಲ್ಲಿ ತುಂಬಿ ಟಾಟಾ ಏಸ್ ವಾಹನದಲ್ಲಿ ಮೂಲಕ 1.5 ಕಿಲೋ ಮೀಟರ್ ದೂರದ ಬೆಟ್ಟಕ್ಕೆ ಸಾಗಿಸಲಾಗಿತ್ತು. ರಾತ್ರಿ 12:30ರ ಸುಮಾರಿಗೆ ಬೆಟ್ಟದಲ್ಲಿ ಚೀಲಗಳನ್ನು ಇಳಿಸಿ ಇಡುವಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
PublicNext
23/02/2021 11:10 am