ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಟ್ವೀಟ್ ಮಾಡುವ ಭರದಲ್ಲಿ ತಾವು ಸದಾ ಅಸ್ಪೃಶ್ಯರು ಎಂದು ತಿಳಿಸಿ ನನ್ನ ಜಾತಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಸಿದ್ದರಾಮಯ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಎಸ್.ಸಿ. ಮೋರ್ಚಾ ವತಿಯಿಂದ ಇಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಿದ್ದರಾಮಯ್ಯರ ಬಗ್ಗೆ ನಮಗೆ ಬಹಳ ಗೌರವವಿದೆ. ಆದರೆ, ಅವರ ರಾಜಕೀಯ ಜಿದ್ದಾಜಿದ್ದಿ ವಿಚಾರದಲ್ಲಿ ನಮ್ಮ ಆಕ್ಷೇಪವಿದೆ ಎಂದು ತಿಳಿಸಿದರು.
ನಮ್ಮನ್ನು ಗುಲಾಮರು, ಅಸ್ಪೃಶ್ಯರೆಂದು ಕರೆದು ನಿಂದಿಸಿದ್ದಾರೆ. ಇಂಥ ನಿಂದನೆಯ ಅಧಿಕಾರ ಅವರಿಗೆ ಇಲ್ಲ. ಎಸ್ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಈ ದೂರು ನೀಡಿದ್ದೇವೆ. ಅವರು ಜಾತಿ ನಿಂದನೆ ಮಾಡಿದ್ದು, ಎಫ್‍ಐಆರ್ ಮಾಡಿ ಬಂಧಿಸಲು ಒತ್ತಾಯಿಸಿದ್ದೇನೆ. ಅವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ಧರಣಿ ಮಾಡುವುದಾಗಿ ತಿಳಿಸಿದರು.
PublicNext
17/06/2022 04:23 pm