ಬೆಳಗಾವಿ: ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಕಾರ್ಯದರ್ಶಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮ ಪಂಚಾಯ್ತಿ ಚುನಾವಣೆ ವೈಷಮ್ಯ ಹಿನ್ನೆಲೆ ಫೈರಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸತೀಶ್ ಜಾರಕಿಹೊಳಿ ಅವರ ಆಪ್ತ ಕಾರ್ಯದರ್ಶಿ ಕಿರಣ್ ರಜಪೂತ್ ಹಾಗೂ ಕಾಂಗ್ರೆಸ್ ಮುಖಂಡ ಭರಮಾ ದೂಪದಾಳೆ ಎಂಬವರ ಮೇಲೆ ಅಪರಿಚಿತ ವ್ಯಕ್ತಿ ಫೈರಿಂಗ್ ನಡೆಸಿದ್ದಾನೆ. ಸತೀಶ್ ಜಾರಕಿಹೊಳಿ ಆಪ್ತ ಕಿರಣ್ ರಜಪೂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೋರ್ವ ಕಾಂಗ್ರೆಸ್ ಮುಖಂಡ ಭರಮಾ ದೂಪದಾಳ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣ ಶೆಟ್ಟಿ ಹಾಗೂ ಪಿಎಸ್‍ಐ ರಮೇಶ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
PublicNext
17/12/2020 01:46 pm