ಧಾರವಾಡ: ಸರ್ಕಾರಗಳು ಯಾರೋ ಒಬ್ಬ ಶಾಸಕ, ಸಂಸದರಿಗೆ ಸಚಿವ ಸ್ಥಾನ ನೀಡಬೇಕಾದರೆ ಅವರಿಗೆ ಆ ಖಾತೆ ಬಗ್ಗೆ ಮಾಹಿತಿ ಇದೆಯೇ ಅಥವಾ ತಿಳುವಳಿಕೆ ಇದೆಯೇ ಎಂಬುದನ್ನು ಅರಿತು ಖಾತೆ ಹಂಚಿಕೆ ಮಾಡಬೇಕು ಅಂದಾಗ ಮಾತ್ರ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಪರಿಸರ ಪ್ರೇಮಿ ಹಾಗೂ ಚಲನಚಿತ್ರ ಹಿರಿಯ ನಟ ಸುರೇಶ ಹೆಬ್ಳಿಕರ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಗಳು ಯಾರಿಗೆ ಬೇಕಾದರೂ ಯಾವ ಖಾತೆಯನ್ನಾದರೂ ನೀಡುತ್ತವೆ. ಆದರೆ, ಅವರಿಗೆ ಆ ಖಾತೆಗಳನ್ನು ನಿಭಾಯಿಸಲು ಇಷ್ಟವಿರುವುದಿಲ್ಲ ಹೀಗಾಗಿ ಅಂತವರಿಂದ ಅಭಿವೃದ್ಧಿ ಕೆಲಸಗಳಾಗುವುದಿಲ್ಲ. ಪ್ರತಿಯೊಂದು ಖಾತೆಯೂ ಕೂಡ ಮಹತ್ವ ಖಾತೆಗಳೇ ಆಗಿರುತ್ತವೆ. ನಿಭಾಯಿಸುವ ಸಮರ್ಥ ಶಕ್ತಿ ಇರಬೇಕು ಎಂದರು.
ಜಗತ್ತಿಗೆ ಇಂದು ಕೊರೊನಾ ಎಂಬ ರೋಗ ಹೆಮ್ಮಾರಿಯಿಂದ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಪರಿಸರ ನಾಶ. ಕಾಡಿನಲ್ಲಿ ಕೇವಲ ಹುಲಿ, ಚಿರತೆ ಅಷ್ಟೇ ಇರುವುದಿಲ್ಲ. ವಿವಿಧ ಜಾತಿಯ ಜೀವ ಜಂತುಗಳು ಇರುತ್ತವೆ. ಪರಿಸರ ನಾಶ ಮಾಡುವುದರಿಂದ ಅವುಗಳು ತಾವು ಬದುಕಲಿಕ್ಕೆ ನಾಡಿಗೆ ಬರುತ್ತವೆ. ಹೀಗೆ ಬಂದ ಜೀವ ಜಂತುಗಳು ಒಂದೊಂದು ವೈರಸ್‌ನ್ನು ತೆಗೆದುಕೊಂಡು ಬರುತ್ತವೆ. ಅದಕ್ಕಾಗಿ ಕಾಡು ನಾಶ ನಿಲ್ಲಿಸಿದರೆ ರೋಗಗಳನ್ನು ತಡೆಗಟ್ಟಬಹುದು ಎಂದರು.
ಇಂದು ಭೂಮಿಯ ಮೇಲೆ ಸಾಕಷ್ಟು ಕೈಗಾರಿಕೆಗಳನ್ನು ಹಾಕಿ ಭೂಮಿಯ ತಾಪಮಾನ ಹೆಚ್ಚಿಗೆ ಮಾಡಿದ್ದೇವೆ. ಪರಿಸರದ ಮೇಲೆ ನಮ್ಮ ಅಂದಾದುಂದಿ ದರ್ಬಾರ ನಡೆದಿದೆ. ಭೂಮಿಯ ಮೇಲಿರುವ ಎಲ್ಲರಿಗೂ ಆಹಾರ, ನೀರು ಸೇರಿದಂತೆ ಎಲ್ಲ ಸೌಕರ್ಯ ಬೇಕು. ಅದಕ್ಕಾಗಿ ನಾವು ಪರಿಸರವನ್ನು ಬಳಕೆ ಮಾಡಿಕೊಳ್ಳುವುದು ಸಹಜ. ಆದರೆ, ಪರಿಸರದ ಮೇಲೆ ದೊಡ್ಡಮಟ್ಟದ ದೌರ್ಜನ್ಯ ನಡೆಸದೇ ನಾಜೂಕಾಗಿ ಅದನ್ನು ಬಳಸಿದಲ್ಲಿ ಮಾತ್ರ ನಾವೆಲ್ಲರು ಸುರಕ್ಷಿತವಾಗಿರುತ್ತೇವೆ. ಪ್ರಗತಿ ಹೆಸರಿನಲ್ಲಿ ನಾವು ಪರಿಸರ ನಾಶ ಮಾಡುತ್ತಿದ್ದೇವೆ. ಈ ಪ್ರಗತಿ ಕೆಲವರಿಗೆ ಮಾತ್ರ ಉಪಯೋಗ ಆಗಿದೆ. ದೇಶದಲ್ಲಿ ಇನ್ನೂ ಶೇ.80 ರಷ್ಟು ಜನ ನೀರು, ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಅನುಭವ ಇಲ್ಲದವರಿಗೆ ಹಾಗೂ ದುಡ್ಡು ಮಾಡುವವರಿಗೆ ಖಾತೆ ಹಂಚಿಕೆ ಮಾಡಿದರೆ ಅಂತಹ ಸರ್ಕಾರಗಳು ಬಹಳ ದಿನ ಉಳಿಯುವುದಿಲ್ಲ ಎಂದರು.
PublicNext
14/08/2021 12:31 pm